– ಎರಡು ವರ್ಷದಲ್ಲಿ ಸುಮಾರು 20 ಲಕ್ಷ ರೂ. ಪಂಗನಾಮ
ತುಮಕೂರು: ಸರ್ಕಾರಿ ಕಾಲೇಜುಗಳಂದ್ರೆ ಅಲ್ಲಿ ಸಾಮಾನ್ಯವಾಗಿ ಬಡ ವಿದ್ಯಾರ್ಥಿಗಳೇ ಹೆಚ್ಚು ವಿದ್ಯಾಭ್ಯಾಸ ಮಾಡುತ್ತಿರುತ್ತಾರೆ. ಕಷ್ಟನೋ, ಸುಖನೋ ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕೆಂದು ಅಪ್ಪ-ಅಮ್ಮಂದಿರು ತಮ್ಮ ಮಕ್ಕಳನ್ನು ಶಾಲೆಗೆ ಕಳುಸುತ್ತಾರೆ. ಆದರೆ ಅತಿಥಿ ಉಪನ್ಯಾಕರಿಗೆ ಸಂಬಳ ಕೊಡುವ ನೆಪದಲ್ಲಿ ಬಡ ವಿದ್ಯಾರ್ಥಿಗಳಿಂದ ಪ್ರಾಂಶುಪಾಲ ಲಕ್ಷ ಲಕ್ಷ ಲೂಟಿ ಮಾಡಿರೋದು ಬೆಳಕಿಗೆ ಬಂದಿದೆ.
ತುಮಕೂರು ಜಿಲ್ಲೆ ತಿಪಟೂರು ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಳೆದ ಐದಾರು ವರ್ಷಗಳಿಂದ ನಿರಂತರವಾಗಿ ವಿದ್ಯಾರ್ಥಿಗಳಿಂದ ಕಾಲೇಜು ಅಭಿವೃದ್ಧಿ ಹೆಸರಿನಲ್ಲಿ ಪ್ರಾಂಶುಪಾಲ ಅಲ್ಲಮಪ್ರಭು ಮತ್ತು ಎಫ್‍ಡಿಎ ಸುನಿಲ್ ಕೂರ್ಗಿ ಇಬ್ಬರೂ ಜತೆಯಾಗಿ ಹಣ ಪೀಕ್ತಿದ್ದಾರೆ. ಸರ್ಕಾರದಿಂದ ಬಿಡುಗಡೆಯಾದ ವೇತನವನ್ನು ತನ್ನ ಕುಟುಂಬದವರ ಖಾತೆಗೆ ಜಮೆ ಮಾಡುತ್ತಿದ್ದಾರೆ.
ಎರಡು ವರ್ಷದಲ್ಲಿ ಸರಿಸುಮಾರು 20 ಲಕ್ಷ ರೂಪಾಯಿ ಲಪಟಾಯಿಸಿದ್ದು, ಕಳೆದ ನಾಲ್ಕೈದು ವರ್ಷಗಳಿಂದ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ 40 ಲಕ್ಷ ಹಣವನ್ನು ಇದೇ ರೀತಿ ಗೋಲ್‍ಮಾಲ್ ಮಾಡಿದ್ದಾರೆ. ಈ ಅಕ್ರಮದ ಆರೋಪದ ಬಗ್ಗೆ ಪದವಿಪೂರ್ವ ಕಾಲೇಜುಗಳ ಉಪನಿರ್ದೇಶಕರ ಕೈವಾಡವೂ ಇದೆ ಎನ್ನಲಾಗ್ತಿದೆ. ಆದರೆ ಈ ಆರೋಪವನ್ನು ಉಪನಿರ್ದೇಶಕ ನರಸಿಂಹಮೂರ್ತಿ ತಳ್ಳಿಹಾಕಿದ್ದಾರೆ.
ಒಟ್ಟಾರೆಯಾಗಿ ಕಾಲೇಜು ಅಭಿವೃದ್ಧಿ ಹೆಸರಲ್ಲಿ ಹಣ ನುಂಗುತ್ತಿದ್ದ ಇಬ್ಬರು ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.