ಚಿಕ್ಕಬಳ್ಳಾಪುರ: ಕರ್ತವ್ಯಕ್ಕೆ ಹಾಜರಾದ ಬಸ್ ಚಾಲಕ ಹಾಗೂ ನಿರ್ವಾಹಕನ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಅರ್ಪಿಸಿ, ಮ್ಯೂಸಿಕ್ ಅಳವಡಿಸಿ ಸಾಮಾಜಿಕ ಜಾಲಾತಾಣದಲ್ಲಿ ಹರಿಬಿಟ್ಟ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ಇಲಾಖೆ ನೌಕರರು ನಡೆಸುತ್ತಿರುವ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದೆ. ಬಹುತೇಕ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗದೆ ಇಲಾಖೆಗೆ ಸೆಡ್ಡು ಹೊಡೆದಿದ್ದಾರೆ. ಜಟಿಲ ಪರಿಸ್ಥಿತಿಯಲ್ಲಿ ಬೆರಳೆಣಿಕೆಯಷ್ಟು ನೌಕರರು ಅಧಿಕಾರಿಗಳ ಮುಲಾಜಿಗೆ ಒಳಗಾಗಿ ಕರ್ತವ್ಯಕ್ಕೆ ಹಾಜರಾಗಿ ಬಸ್ ಚಾಲನೆಗೆ ಮುಂದಾಗಿದ್ದಾರೆ.
ಇದನ್ನರಿತ ಇತರೆ ಸಾರಿಗೆ ಇಲಾಖೆ ನೌಕರರು ಕರ್ತವ್ಯಕ್ಕೆ ಹಾಜರಾದ ಬಸ್ ಚಾಲಕ ನಿರ್ವಾಹಕನ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಅರ್ಪಿಸಿ ಮ್ಯೂಸಿಕ್ ಅಳವಡಿಸಿ ಸಾಮಾಜಿಕ ಜಾಲಾತಾಣದಲ್ಲಿ ಹರಿಬಿಟ್ಟಿದ್ದಾರೆ. ಇದನ್ನು ನೋಡಿದ ಅವರ ಬಂಧುಬಳಗ, ಸಂಬಂಧಿಗಳು ಹಾಗೂ ಸ್ನೇಹಿತರುಗಳು ಅರೇ ಇದೇನಿದು ನಿನ್ನೆ ತಾನೇ ಬೆಳಗ್ಗೆ ಚೆನ್ನಾಗಿದ್ದ ಅದೇನ್ ಆಯಿತು ಅಂತ ಮನೆ ಬಳಿ ಬಂದು ಶವ ಸಂಸ್ಕಾರದಲ್ಲಿ ಭಾಗಿಯಾಗುವ ಯೋಚನೆ ಮಾಡ್ತಿದ್ದಾರೆ. ಇಂತಹ ಶ್ರದ್ಧಾಂಜಲಿಗೆ ಒಳಗಾದ ವ್ಯಕ್ತಿ ಜೀವಂತವಾಗಿದ್ದಿದ್ದನ್ನು ಕಂಡು ಜನ ಕೆಲಕಾಲ ಆಶ್ಚರ್ಯ ಆತಂಕಕ್ಕೊಳಗಾದ ಪ್ರಸಂಗಗಳು ನಡೆದಿದೆ.
ಹೌದು. ಚಿಕ್ಕಬಳ್ಳಾಪುರದ ಕೆ.ಎಸ್.ಆರ್.ಟಿ.ಸಿ ಡೀಪೊದಲ್ಲಿ ಹಿರಿಯ ಚಾಲಕ ಹಾಗೂ ಹಿರಿಯ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸೂರ್ಯನಾರಾಯಣರಾವ್ ಹಾಗೂ ಬಿ.ವಿಕೆ ಮೂರ್ತಿ ಹಾಗೂ ಪುರುಷೋತ್ತಮ ಎಂಬವರು ಇನ್ನೇನು ನಾಲ್ಕೈದು ತಿಂಗಳಾದ್ರೆ ನಿವೃತ್ತಿಯಾಗಬೇಕು. ಅಷ್ಟರಲ್ಲೆ ಈಗ ಮುಷ್ಕರ ಆರಂಭವಾಗಿದೆ. ಅಧಿಕಾರಿಗಳ ಒತ್ತಡ ತಂತ್ರಕ್ಕೆ ಮಣಿದು ನಿನ್ನೆ ಚಿಕ್ಕಬಳ್ಳಾಪುರದಿಂದ ಬಾಗೇಪಲ್ಲಿವರೆಗೂ ಬಸ್ ಚಲಾಯಿಸಿ ಕರ್ತವ್ಯ ಮಾಡಿದ್ದಕ್ಕೆ ಸ್ವತಃ ಅವರ ಸಹೋದ್ಯೋಗಿಗಳು ರಾತ್ರೋರಾತ್ರಿ ಅವರ ಭಾವಚಿತ್ರಗಳಿಗೆ ಶ್ರದ್ಧಾಂಜಲಿ ಅರ್ಪಿಸಿ ‘ಮರಳಿ ಬಾರದೂರಿಗೆ ನಿನ್ನ ಪಯಣ’ ಅಂತ ಹಾಡು ಸೇರಿಸಿ ಸಾಮಾಜಿಕ ಜಾಲಾತಾಣದಲ್ಲಿ ಹರಿಬಿಟ್ಟಿದ್ದಾರೆ.
ಇದನ್ನು ನೋಡಿದ ನೌಕರರ ಸ್ನೇಹಿತರು, ಬಂಧು ಸ್ನೇಹಿತರು ದೂರದೂರಿನ ಸಂಬಂಧಿಗಳು ಶವ ಸಂಸ್ಕಾರಕ್ಕೆ ಬರುವ ಮಾತುಗಳನ್ನು ಆಡಿದ್ರು. ಆದರೆ ಇತ್ತ ಸ್ವತಃ ಬದುಕಿರುವ ಇಬ್ಬರ ನೌಕರರ ಸ್ಥಿತಿ ಏನಾಗಿರಬೇಡ, ಕೊನೆಗೆ ಅವರ ಸಂಬಂಧಿಗಳೇ ಮನವರಿಕೆ ಮಾಡಿದ ಮೇಲೆ ಒಪ್ಪಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಇದನ್ನರಿತ ಇಬ್ಬರು ನೌಕರರು ಇಂದು ಡೀಪೊ ಬಳಿ ಆಗಮಿಸಿ ತಮ್ಮ ಅಧಿಕಾರಿಗಳ ಬಳಿ ಕಣ್ಣೀರು ಹಾಕಿದ್ದಾರೆ.