ಹಾವೇರಿ: ನಿರಂತರ ಶೋಧಕಾರ್ಯದಿಂದ ಆರು ದಿನಗಳ ನಂತರ ನದಿ ಪಾಲಾಗಿದ್ದ ಯುವತಿಯ ಮೃತದೇಹ ಪತ್ತೆಯಾಗಿದೆ.
ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಮಲಕನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. 19 ವರ್ಷದ ಶಶಿಕಲಾ ಮಾಳಿಗೇರ ಮೃತ ಯುವತಿ. ನದಿಯಲ್ಲಿನ ಮುಳ್ಳುಕಂಟೆಯಲ್ಲಿ ಯುವತಿಯ ಮೃತದೇಹ ಸಿಕ್ಕಿಹಾಕಿಕೊಂಡಿತ್ತು.
ಆಗಸ್ಟ್ 16 ರಂದು ಸಂಜೆ ಶಶಿಕಲಾ ಕುಮದ್ವತಿ ನದಿಗೆ ಬಟ್ಟೆ ತೊಳೆಯಲು ಹೋಗಿದ್ದಳು. ಈ ವೇಳೆ ಆಕಸ್ಮಿಕವಾಗಿ ಬಟ್ಟೆ ತೊಳೆಯುತ್ತಿದ್ದಾಗ ಕಾಲು ಜಾರಿ ನದಿಗೆ ಬಿದ್ದಿದ್ದಳು. ಅಂದಿನಿಂದ ಗ್ರಾಮಸ್ಥರು, ಅಗ್ನಿಶಾಮಕದಳ ಹಾಗೂ ಮುಳುಗು ತಜ್ಞರು ಯುವತಿಗಾಗಿ ಶೋಧಕಾರ್ಯ ನಡೆಸಿದ್ದರು. ಆದರೆ ಪತ್ತೆಯಾಗಿರಲಿಲ್ಲ.
ಇಂದು ನದಿಯಲ್ಲಿನ ಮುಳ್ಳುಕಂಟೆಯಲ್ಲಿ ಯುವತಿಯ ಮೃತದೇಹ ಪತ್ತೆಯಾಗಿದೆ. ನಂತರ ಯುವತಿಯ ಮೃತದೇಹವನ್ನು ನದಿಯಿಂದ ಹೊರಗೆ ತಂದಿದ್ದು, ಸ್ಥಳದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಘಟನೆ ಹಲಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.