ಬಂಧಿಸಲು ಹೋದ ಪೊಲೀಸರ ಮೇಲೆ ಬಾಂಬ್ ಎಸೆದ – ಪೇದೆ ಸಾವು, ಡಬಲ್ ಕೊಲೆಗಾರನೂ ಬಲಿ

Public TV
1 Min Read
ConstableSubramaniam 1200

– ಡಬಲ್ ಮರ್ಡರ್ ಆರೋಪಿ ಕೈಯಲ್ಲೇ ಬಾಂಬ್ ಸ್ಫೋಟ

ಚೆನ್ನೈ: ಡಬಲ್ ಮರ್ಡರ್ ಆರೋಪಿಯನ್ನು ಹಿಡಿಯಲು ಹೋಗಿದ್ದ ವಿಶೇಷ ಪೊಲೀಸ್ ತಂಡದ ಮೇಲೆ ಆರೋಪಿ ದೇಶಿ ಬಾಂಬ್ ದಾಳಿ ನಡೆಸಿದ್ದಾನೆ. ಪರಿಣಾಮ ಪೊಲೀಸ್ ಕಾನ್‍ಸ್ಟೇಬಲ್ ಓರ್ವ ಮೃತಪಟ್ಟಿರುವ ಘಟನೆ ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಮನಕ್ಕರೈನಲ್ಲಿ ಕರ್ತವ್ಯದಲ್ಲಿದ್ದ ಸುಬ್ರಮಣ್ಯಂ ಮೃತ ಪೊಲೀಸ್ ಕಾನ್‍ಸ್ಟೇಬಲ್. ವಿಶೇಷ ಪೊಲೀಸ್ ತಂಡದ ಮೇಲೆ ಆರೋಪಿ ಎಸೆದ ಎರಡು ಬಾಂಬ್‍ಗಳಲ್ಲಿ ಎರಡನೇ ಬಾಂಬ್ ಸ್ಫೋಟಗೊಂಡಿದೆ. ಪರಿಣಾಮ ಕಾನ್‍ಸ್ಟೇಬಲ್ ತಲೆಗೆ ಗಂಭೀರವಾಗಿ ಗಾಯವಾಗಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅಜವರ್ತಿರುನಗರಿ ಪೊಲೀಸ್ ಠಾಣೆಗೆ ಸುಬ್ರಮಣ್ಯಂ ಕರ್ತವ್ಯ ನಿರ್ವಹಿಸುತ್ತಿದ್ದರು. ಕಾನ್‍ಸ್ಟೇಬಲ್ ಸುಬ್ರಮಣ್ಯಂ ಪತ್ನಿ ಮತ್ತು ಅವರ 6 ತಿಂಗಳ ಮಗುವನ್ನು ಅಗಲಿದ್ದಾರೆ.

duraimuthu medium

ಆರೋಪಿಯನ್ನು ಮೇಲಮಂಗಲಕುರಿಚಿ ಮೂಲದ ದುರೈ ಮುತ್ತು ಎಂದು ಗುರುತಿಸಲಾಗಿದೆ. ಆರೋಪಿ ಬಾಂಬುಗಳನ್ನು ಎಸೆಯುವಾಗ ಕೈಯಲ್ಲೇ ಬಾಂಬ್ ಸ್ಫೋಟಗೊಂಡು ಕೈಗಳಿಗೆ ಗಂಭೀರವಾಗಿ ಗಾಯಗಳಾಗಿತ್ತು. ತಕ್ಷಣ ಆತನನ್ನು ಸಮೀಪದ ತಿರುನೆಲ್ವೇಲಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆರೋಪಿಯೂ ಸಾವನ್ನಪ್ಪಿದ್ದಾನೆ.

210491 tamil nadu cm medium

ದುರೈ ಮುತ್ತು ವಿರುದ್ಧ ಎರಡು ಕೊಲೆ ಪ್ರಕರಣಗಳು ದಾಖಲಾಗಿದ್ದವು. ತಲೆಮರೆಸಿಕೊಂಡಿದ್ದ ಆರೋಪಿ ದುರೈ ಮುತ್ತುನನ್ನು ಪೊಲೀಸರು ಹುಡುಕುತ್ತಿದ್ದರು. ಆತನನ್ನು ಬಂಧಿಸಲು ಸಬ್ ಇನ್ಸ್‌ಪೆಕ್ಟರ್ ಮುರುಗ ಪೆರುಮಾಳ್ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಖಚಿತ ಮಾಹಿತಿ ಮೇರೆಗೆ ವಿಶೇಷ ತಂಡವು ದುರೈ ಮುತ್ತು ಆತನ ಸಹೋದರ ಮತ್ತು ಇತರ ಸಹಚರರೊಂದಿಗೆ ಅಡಗಿಕೊಂಡಿದ್ದ ಸ್ಥಳವನ್ನು ತಲುಪಿದೆ. ಈ ವೇಳೆ ದುರೈ ಮುತ್ತು ಪೊಲೀಸ್ ತಂಡದ ಮೇಲೆ ದೇಶಿ ಬಾಂಬುಗಳನ್ನು ಎಸೆದಿದ್ದಾನೆ ಎಂದು ತಿಳಿದುಬಂದಿದೆ.

ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಕಾನ್‍ಸ್ಟೇಬಲ್ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಅಲ್ಲದೇ ಸುಬ್ರಮಣ್ಯಂ ಅವರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಅಲ್ಲದೇ ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗದ ನೀಡುವ ಭರವಸೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *