ಬೆಂಗಳೂರು: ಬಂಡಾಯ ಸಾಹಿತಿ ಡಾ.ಸಿದ್ದಲಿಂಗಯ್ಯ (67) ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕೊರೊನಾ ಸೋಂಕು ತಗುಲಿದ ಹಿನ್ನೆಲೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಿದ್ದಲಿಂಗಯ್ಯ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.
Advertisement
ಸಿದ್ಧಲಿಂಗಯ್ಯನವರು ಮಾಗಡಿ ತಾಲೂಕಿನ ಮಂಚನಬೆಲೆ’ ಗ್ರಾಮದಲ್ಲಿ 1954ರಲ್ಲಿ ಜನಿಸಿದರು. ವಿದ್ಯಾರ್ಥಿ ದೆಸೆಯಲ್ಲಿಯೇ ಇವರು ಉತ್ತಮ ಭಾಷಣಕಾರರಾಗಿದ್ದರು. ಅಂಬೇಡ್ಕರ್, ಪೆರಿಯಾರ್, ವಸುದೇವಭೂಪಾಲ, ಲೋಹಿಯಾ ಮುಂತಾದವರ ವಿಚಾರಧಾರೆಗಳಿಂದ ಆಕರ್ಷಿತರಾಗಿದ್ದರು.
Advertisement
Advertisement
ಇಂದು ಸಂಜೆ 4.45ಕ್ಕೆ ಸಿದ್ದಲಿಂಗಯ್ಯ ನಿಧನರಾಗಿದ್ದು, ಇವತ್ತೇ ಅಂತ್ಯಕ್ರಿಯೆ ನಡೆಯುವ ಸಾಧ್ಯತೆಗಳಿವೆ.
Advertisement
ಹೊಲೆಮಾದಿಗರ ಹಾಡು, ಸಾವಿರಾರು ನದಿಗಳು, ಕಪ್ಪು ಕಾಡಿನ ಹಾಡು, ಆಯ್ದ ಕವಿತೆಗಳು, ಮೆರವಣಿಗೆ, ನನ್ನ ಜನಗಳು ಮತ್ತು ಇತರ ಕವಿತೆಗಳು, ಕುದಿವ ನೀಲಿಯ ಕಡಲು, ಊರು ಸಾಗರವಾಗಿ ಸೇರಿದಂತೆ ಮುಂತಾದ ಕವನ ಸಂಕಲನಗಳನ್ನು ರಚಿಸಿದ್ದಾರೆ. ಊರು ಕೇರಿ ಎಂಬ ಆತ್ಮಕಥನ ಬರೆದಿದ್ದಾರೆ. ಅಲ್ಲದೆ ಪಂಚಮ, ನೆಲಸಮ, ಏಕಲವ್ಯ ನಾಟಕಗಳನ್ನು ರಚಿಸಿದ್ದಾರೆ. ಹಕ್ಕಿನೋಟ, ಗ್ರಾಮದೇವತೆಗಳು, ಅವತಾರಗಳು, ಜನ ಸಂಸ್ಕೃತಿ, ಆ ಮುಖ ಈ ಮುಖ ಎಂಬ ವಿಮರ್ಶಾ ಕೃತಿಗಳನ್ನು ಬರೆದಿದ್ದಾರೆ.
ಪಂಪ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ನೃಪತುಂಗ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅಲ್ಲದೆ 2015ರಲ್ಲಿ ನಡೆದ 81ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಸಹ ಆಗಿದ್ದರು.
ಸಿದ್ದಲಿಂಗಯ್ಯನವರು 1988-94 ಮತ್ತು 1995-2001ರವರೆಗೆ ಎರಡುಬಾರಿ ವಿಧಾನ ಪರಿಷತ್ತಿನ ಸದಸ್ಯರಾಗಿ ನಾಮಕರಣಗೊಂಡಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಪ್ರಶಸ್ತಿಗಳು:
* ಉತ್ತಮ ಚಲನಚಿತ್ರಗೀತ ರಚನೆಗಾಗಿ ಕರ್ನಾಟಕ ಸರ್ಕಾರ ಪ್ರಶಸ್ತಿ-1984
* ರಾಜ್ಯೋತ್ಸವ ಪ್ರಶಸ್ತಿ -ಕರ್ನಾಟಕ ಸರ್ಕಾರ-1986
* ಡಾ.ಅಂಬೇಡ್ಕರ್ ಶತಮಾನೋತ್ಸವ ವಿಶೇಷ ಪ್ರಶಸ್ತಿ -1992
* ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ -1996
* ಜಾನಪದ ತಜ್ಞ ಪ್ರಶಸ್ತಿ -2001
* ಸಂದೇಶ್ ಪ್ರಶಸ್ತಿ -2001
* ಡಾ.ಅಂಬೇಡ್ಕರ್ ಪ್ರಶಸ್ತಿ -2002
* ಸತ್ಯಕಾಮ ಪ್ರತಿಷ್ಠಾನ ಪ್ರಶಸ್ತಿ -2002
* ಬಾಬುಜಗಜೀವನರಾಮ್ ಪ್ರಶಸ್ತಿ -2005
* ನಾಡೋಜ ಪ್ರಶಸ್ತಿ -2007
* ಪ್ರೆಸಿಡೆನ್ಸಿ ಇನ್ಷಿಟ್ಯೂಷನ್ ಪ್ರಶಸ್ತಿ -2012
* ಆಳ್ವಾಸ್ ನುಡಿಸಿರಿ ಪ್ರಶಸ್ತಿ -2012
* ನೃಪತುಂಗ ಪ್ರಶಸ್ತಿ -2018
* ಪಂಪ ಪ್ರಶಸ್ತಿ – 2019 ಗೌರವ ಪ್ರಶಸ್ತಿಗೆ ಭಾಜನರಾಗಿದ್ದರು