ನವದೆಹಲಿ: ಪಂಚ ರಾಜ್ಯಗಳ ಪೈಕಿ ಅತಿ ಹೆಚ್ಚು ಕುತೂಹಲ ಮೂಡಿಸಿರುವ ಪಶ್ಚಿಮ ಬಂಗಾಳದಲ್ಲಿ ಇಂದು ಮೊದಲ ಹಂತದ ಚುನಾವಣೆ ನಡೆಯಲಿದೆ. 294 ಕ್ಷೇತ್ರಗಳ ಪೈಕಿ 30 ಕ್ಷೇತ್ರಗಳಿಗೆ ಇಂದು ಮೊದಲ ಹಂತದಲ್ಲಿ ಮತದಾನ ನಡೆಯಲಿದೆ.
21 ಮಹಿಳೆಯರು ಸೇರಿ 191 ಅಭ್ಯರ್ಥಿಗಳು ಕಣದಲ್ಲಿದ್ದು ಜನರು ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ. ಟಿಎಂಸಿ ಮತ್ತು ಬಿಜೆಪಿ ನಡುವೆ ತೀವ್ರ ಸೆಣಸಾಟವಿರುವ ಹಿನ್ನೆಲೆ ಮೊದಲ ಹಂತದ ಮತದಾನಕ್ಕೆ ಭಾರೀ ಬಿಗಿ ಭದ್ರತೆ ನಿಯೋಜನೆ ಮಾಡಿದ್ದು 732 (ಸಿಎಪಿಎಫ್) ಸಶಸ್ತ್ರ ಮೀಸಲು ಪಡೆ ಕಂಪನಿಗಳ ನೇಮಕ ಮಾಡಿದೆ.
Advertisement
Advertisement
ಸದ್ಯ ಚುನಾವಣೆ ನಡೆಯುತ್ತಿರುವ 30 ಕ್ಷೇತ್ರಗಳಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ 27 ಕ್ಷೇತ್ರಗಳಲ್ಲಿ ಟಿಎಂಸಿ ಜಯಭೇರಿ ಬಾರಿಸಿತ್ತು. 2019ರ ಲೋಕಸಭೆ ಚುನಾವಣೆಯಲ್ಲೂ 18 ಕ್ಷೇತ್ರಗಳನ್ನು ಗೆದ್ದು ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿತ್ತು.
Advertisement
ಮೊದಲ ಹಂತದಲ್ಲಿ ಚುನಾವಣೆ ನಡೆಯುತ್ತಿರುವ ಕ್ಷೇತ್ರಗಳ ಪೈಕಿ ಗೋಪಿ ಬಲ್ಲವಪುರ, ಸೆಲ್ಬೋನಿ, ಜಾರ್ಗ್‍ಂಕಂತಿ, ಉತ್ತರಕರಪುರ, ರಾಮನಗರ, ಕಂತಿ ಉತ್ತರ, ಜಾರ್ಗಮ್ ಕ್ಷೇತ್ರಗಳು ಸೂಕ್ಷ್ಮ ಕ್ಷೇತ್ರಗಳು ಎಂದು ಆಯೋಗ ಹೇಳಿದೆ. ಒಟ್ಟು ಎಂಟು ಹಂತದಲ್ಲಿ ನಡೆಯಲಿದ್ದು ಎಪ್ರಿಲ್ 01, 06, 10, 17, 22, 26, 29 ರಂದು ಬಾಕಿ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
Advertisement
ಮೂರನೇ ಬಾರಿ ಸಿಎಂ ಗದ್ದುಗೆ ಏರಲು ಸಿಎಂ ಮಮತಾ ಬ್ಯಾನರ್ಜಿ ಪ್ರಯತ್ನ
40 ವರ್ಷಗಳ ಹಿಂದೆ ಪಶ್ಚಿಮ ಬಂಗಾಳದಲ್ಲಿ ಎಡಪಕ್ಷಗಳ ಕಪಿಮುಷ್ಠಿಯಲ್ಲಿತ್ತು. ಕೈಗಾರಿಕೆಗಳಿಗೆ ರೈತರ ಭೂಮಿ ನೀಡುವ ಎಡಪಕ್ಷದ ಸರ್ಕಾರ ನಿರ್ಧಾರ ವಿರೋಧಿಸಿ 2011 ರಲ್ಲಿ ನಂದಿಗ್ರಾಮದಲ್ಲಿ ಹೋರಾಟ ಆರಂಭಿಸಿದ ಮಮತಾ ಬ್ಯಾನರ್ಜಿ ಬಂಗಾಳದಲ್ಲಿ ಹೊಸ ಟ್ರೆಂಡ್ ಹುಟ್ಟುಹಾಕಿದ್ದರು. 2011 ರಿಂದ ಎರಡು ಬಾರಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಮಮತಾ ಈ ಬಾರಿ ಹ್ಯಾಟ್ರಿಕ್ ಸಾಧನೆ ಮಾಡಲು ಪ್ರಯತ್ನಿಸುತ್ತಿದ್ದಾರೆ.
ಸಿಎಎ, ಎನ್‍ಆರ್‍ಸಿ ವಿರೋಧ, ಮೂರು ಕೃಷಿ ಕಾನೂನುಗಳನ್ನು ವಿರೋಧಿಸುವುದು, ಪ್ರತಿವರ್ಷ 5 ಲಕ್ಷ ಉದ್ಯೋಗ ಸೃಷ್ಟಿ, ವಿದ್ಯಾರ್ಥಿಗಳಿಗೆ ಸ್ಟೂಡೆಂಟ್ ಕ್ರೆಡಿಟ್ ಕಾರ್ಡ್, ರೈತರ ಆದಾಯ ಏರಿಕೆ, ಮಾಶಸನ ಹೆಚ್ಚಳ, ಮನೆ ಬಾಗಿಲಿಗೆ ರೇಷನ್, ಮಹಿಶ್ಯ ತಿಲಿ, ತಮುಲ್, ಸಹಾಸ್ ಸಮುದಾಯಗಳನ್ನು ಒಬಿಸಿಗೆ ಸೇರಿಸಲು ಸಮಿತಿ ರಚನೆ ಸೇರಿದಂತೆ ಹಲವು ಭರವಸೆಗಳನ್ನು ಮಮತಾ ನೀಡಿದ್ದಾರೆ.
ಇತ್ತ ಎಡಪಂಥೀಯ ನಿಲುಗಳಿರುವ ರಾಜ್ಯದಲ್ಲಿ ಈ ಬಾರಿ ಕೇಸರಿ ಧ್ವಜ ಹಾರಿಸಲು ಬಿಜೆಪಿ ನಿರಂತರ ಪ್ರಯತ್ನ ಮಾಡುತ್ತಿದೆ. 2019ರ ಲೋಕಸಭೆ ಸಮರದಲ್ಲಿ ಸೀಟು ಹೆಚ್ಚಿರುವುದೇ ಬಿಜೆಪಿ ಉತ್ಸಾಹಕ್ಕೆ ಕಾರಣವಾಗಿದೆ. ಕಳೆದ ಚುನಾವಣೆಯಲ್ಲಿ 34 ಸ್ಥಾನಗಳಿಂದ 22ಕ್ಕೆ ಟಿಎಂಸಿ ಕುಸಿದರೇ, ಬಿಜೆಪಿ 18 ಕ್ಷೇತ್ರಗಳಲ್ಲಿ ಗೆಲ್ಲಲು ಮೂಲಕ ಅಚ್ಚರಿ ಮೂಡಿಸಿತ್ತು. ಇದೇ ಕಾರಣಕ್ಕಾಗಿ ಬಿಜೆಪಿ ತನ್ನೆಲ್ಲ ಸಾಮಥ್ರ್ಯವನ್ನು ಪಶ್ಚಿಮ ಬಂಗಾಳದಲ್ಲಿ ಹಾಕಿದೆ.
ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಾರಿಗೆ ಸಚಿವ ನಿತಿನ್ ಗಡ್ಕರಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯ ನಾಥ್ ಸೇರಿದಂತೆ ದೊಡ್ಡ ದೊಡ್ಡ ನಾಯಕರು ಪ್ರಚಾರ ನಡೆಸಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಮೊದಲ ಸಂಪುಟ ಸಭೆಯಲ್ಲಿ ಸಿಎಎ ಜಾರಿ ಮಾಡುವ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದೆ. ಅಲ್ಲದೇ ಮಹಿಶ್ಯ ತಿಲಿ, ತಮುಲ್, ಸಹಾಸ್ ಸಮುದಾಯಗಳನ್ನು ಒಬಿಸಿಗೆ ಮಾನ್ಯತೆ, ರೈತರು ಮೀನುಗಾರರಿಗೆ ಆರ್ಥಿಕ ಭದ್ರತೆ ಮತ್ತು ಮೂರು ಲಕ್ಷದ ವಿಮೆ, ಎಲ್ ಕೆಜಿಯಿಂದ ಪಿಜಿ ವರೆಗೂ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ, ಮಹಿಳೆಯರಿಗೆ 33% ಮೀಸಲಾತಿ, ಮನೆಗೊಬ್ಬರಿಗೆ ನೌಕರಿ,ಬಂಗಾಳಿ ಭಾಷೆಗೆ ಆದ್ಯತೆ ಸೇರಿ ಹಲವು ಭರವಸೆ ಬಿಜೆಪಿ ನೀಡಿದೆ.
ಕುಸಿದ ಬಲ, ನೆಪಮಾತ್ರಕ್ಕೆ ಸ್ಪರ್ಧೆ
ಈ ಬಾರಿ ಚುನಾವಣೆಯಲ್ಲಿ ಸಿಪಿಐ(ಎಂ) ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದು ಚುನಾವಣಾ ಅಖಾಡದಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದೆ. ಟಿಎಂಸಿ ಬಿಜೆಪಿ ನಡುವಿನ ಹೋರಾಟದಲ್ಲಿ ಅಸ್ತಿತ್ವಕ್ಕಗಾಗಿ ಈ ಎರಡು ಪಕ್ಷಗಳು ಹೋರಾಡುತ್ತಿವೆ.
ಈಗಾಗಲೇ ಕಮ್ಯುನಿಸ್ಟ್ ನೆಲದಲ್ಲಿ ಕಮ್ಯುನಿಸ್ಟ್ ಪಕ್ಷವೇ ನೆಲಕಚ್ಚಿದೆ. ಮಮತಾ ಅಲೆಯಲ್ಲಿ ಕುಸಿತ ಕಂಡಿದ್ದ ಸಿಪಿಐ(ಎಂ) ಬಿಜೆಪಿ ಅಬ್ಬರದಲ್ಲಿ ನೆಲಕಚ್ಚಿದೆ. 2016ರಲ್ಲಿ 19 ಕ್ಷೇತ್ರಗಳಲ್ಲಿ ಗೆದಿದ್ದ ಕಮ್ಯುನಿಸ್ಟ್ 2019 ರಲ್ಲಿ ಇದ್ದ ಎರಡು ಲೋಕಸಭೆ ಕ್ಷೇತ್ರಗಳಲ್ಲೂ ಸೋತು ಸೊನ್ನೇ ಸುತ್ತಿಕೊಂಡಿತ್ತು. ಹಾಗಾಗಿ ಈ ಬಾರಿ ಕಮ್ಯುನಿಸ್ಟ್ ನಿಂದ ದೊಡ್ಡದೇನು ನಿರೀಕ್ಷಿಸಲು ಸಾಧ್ಯವಿಲ್ಲ ಎನ್ನಲಾಗುತ್ತಿದೆ.
ಇನ್ನು ಸಿಪಿಐ(ಎಂ) ಜೊತೆಗೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ ಕಥೆ ಭಿನ್ನವಾಗಿಲ್ಲ.2016 ರಲ್ಲಿ 23 ಸ್ಥಾನಗಳನ್ನು ಮಾತ್ರ ಗೆಲ್ಲುವಲ್ಲಿ ಸಫಲವಾಗಿದ್ದ ಕೈ, 2019 ರ ಲೋಕಸಭೆಯಲ್ಲಿ ನಾಲ್ಕು ಸ್ಥಾನಗಳಿಂದ ಎರಡಕ್ಕೆ ಇಳದಿತ್ತು. ಹೀಗಾಗಿ ಈಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಕಮ್ಯುನಿಸ್ಟ್ ಬಲ ಕುಸಿದಿದ್ದು, ನೆಪಮಾತ್ರಕ್ಕೆ ಸ್ಪರ್ಧೆ ಮಾಡುವಂತಾಗಿದೆ.
ಬಿಜೆಪಿ – ಟಿಎಂಸಿ ಸಮ ಬಲದ ಹೋರಾಟ
ಸದ್ಯ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ವಸರ್ಸ್ ಬಿಜೆಪಿ ಹೋರಾಟ ನಡೆಯುತ್ತಿದೆ. ಮಮತಾ ಬ್ಯಾನರ್ಜಿ ಬಲಗೈಯಂತಿದ್ದ ಸುವೇಂದು ಅಧಿಕಾರಿ ಸೇರಿದಂತೆ 10 ಕ್ಕೂ ಅಧಿಕ ಪ್ರಮುಖ ನಾಯಕರು ಬಿಜೆಪಿ ಸೇರಿದ್ದು ಟಿಎಂಸಿಗೆ ಈ ಬಾರಿ ದೊಡ್ಡ ಹಿನ್ನಡೆ ಎನ್ನಲಾಗಿದೆ. ಸುವೇಂದು ಅಧಿಕಾರಿ ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ವಿರುದ್ಧವೇ ಸ್ಪರ್ಧೆ ಮಾಡುತ್ತಿದ್ದಾರೆ.
ನಂದಿಗ್ರಾಮದಲ್ಲಿ ಪ್ರಚಾರ ವೇಳೆದ ಗಲಭೆಯಲ್ಲಿ ಮಮತಾ ಬ್ಯಾನರ್ಜಿ ಮೇಲೆ ಹಲ್ಲೆಯಾಗಿದ್ದು ರಾಜಕೀಯ ಕೆಸರಾಟಕ್ಕೆ ಕಾರಣವಾಗಿತ್ತು. ಈ ದಾಳಿಯಲ್ಲಿ ಮಮತಾ ಬ್ಯಾನರ್ಜಿ ಎಡಗಾಲಿಗೆ ಗಂಭೀರ ಗಾಯವಾಗಿತ್ತು. ಹಲ್ಲೆಯ ಹಿಂದೆ ಬಿಜೆಪಿ ಇದೆ, ನಾನೊಂದು ಗಾಯಾಗೊಂಡ ಹುಲಿ ಬಿಜೆಪಿಯಂಥ ಪಕ್ಷಕ್ಕೆ ಅಧಿಕಾರ ರಚಿಸಲು ಬಿಡುವುದಿಲ್ಲ ಎಂದು ವೀಲ್ ಚೇರ್ ಮೇಲೆ ಮಮತಾ ಪ್ರಚಾರ ನಡೆಸಿದ್ದರು. ಇತ್ತ ಬಿಜೆಪಿ ಕೂಡಾ ಮಮತಾ ಗೆ ಪ್ರತಿಹಂತದಲ್ಲೂ ತಿರುಗೇಟು ನೀಡುವ ಪ್ರಯತ್ನ ಮಾಡುತ್ತಿದ್ದು ಇಂದಿನ ಮೊದಲ ಹಂತದಲ್ಲಿ ನಡೆಯುತ್ತಿರುವ ಮತದಾನ ಯಾರಿಗೆ ವೇಗ ನೀಡಲಿದೆ ಎನ್ನುವುದು ಕಾದು ನೋಡಬೇಕು
ಶಬ್ಬೀರ್ ನಿಡಗುಂದಿ