– ಶಾ ಕ್ಯಾಂಪೇನ್ ಮಾಡಿದ್ದ ಕ್ಷೇತ್ರದಲ್ಲಿಯೇ ಪಾದಯಾತ್ರೆ
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಭಾರತೀಯ ಜನತಾ ಪಾರ್ಟಿ ಕೇವಲ 30 ಕ್ಷೇತ್ರಗಳಲ್ಲಿ ಗೆದ್ದು ತೋರಿಸಲು ಎಂದು ಸಿಎಂ ಮಮತಾ ಬ್ಯಾನರ್ಜಿ ಬಹಿರಂಗ ಸವಾಲು ಹಾಕಿದ್ದಾರೆ. ಕೆಲ ದಿನಗಳ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಿದ್ದ ಭೀರ್‍ಭೂಮ್ ಕ್ಷೇತ್ರದಲ್ಲಿಯೇ ಮಮತಾ ಬ್ಯಾನರ್ಜಿ ಪಾದಯಾತ್ರೆ ನಡೆಸಿದರು. ಮುಂದಿನ ವರ್ಷದ ವಿಧಾನಸಭಾ ಚುನಾವಣೆಗೆ ಪಶ್ಚಿಮ ಬಂಗಾಳ ಅಖಾಡ ಸಿದ್ಧಗೊಳ್ಳುತ್ತಿದ್ದು, ಏಟು-ತಿರುಗೇಟುಗಳು ಪ್ರಾರಂಭಗೊಂಡಿವೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನಂತರ ಅಮಿತ್ ಶಾ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದರು.
ಕೆಲ ಶಾಸಕರು ಪಕ್ಷ ತೊರೆಯುವದರಿಂದ ಟಿಎಂಸಿಗೆ ಯಾವುದೇ ನಷ್ಟವಿಲ್ಲ. ಬಿಜೆಪಿ ನಮ್ಮ ಶಾಸಕರನ್ನ ಖರೀದಿ ಮಾಡಬಹುದೇ ವಿನಃ ಪಕ್ಷವನ್ನಲ್ಲ. ಪಶ್ಚಿಮ ಬಂಗಾಳದ ಜನತೆ ನಮ್ಮ ಜೊತೆಯಲ್ಲಿದ್ದಾರೆ. ಹಾಗಾಗಿ ಬಿಜೆಪಿ 294 ಕ್ಷೇತ್ರಗಳಲ್ಲಿ ಗೆಲ್ಲುವ ಕನಸಿನಿಂದ ಹೊರ ಬರಬೇಕಿದೆ. ಕೇವಲ 30 ಸೀಟ್ ಗೆದ್ದು ಬಿಜೆಪಿ ತೋರಿಸಲಿ ಅಂತ ಸವಾಲ್ ಹಾಕಿದರು.
ರಾಜ್ಯಕ್ಕೆ ಬರುತ್ತಿರುವ ಕೆಲವರು ಪಶ್ಚಿಮ ಬಂಗಾಳದ ಸಂಸ್ಕೃತಿಯನ್ನ ನಾಶಗೊಳಿಸಲು ಸಂಚು ರೂಪಿಸುತ್ತಿದ್ದಾರೆ. ಬಿಜೆಪಿ ಹಿಂಸೆ ಮತ್ತು ವಿಭಜನೆ ರಾಜಕಾರಣದಿಂದ ಹಿಂದೆ ಸರಿಯಬೇಕು. ದೇಶಕ್ಕೆ ಸಾತಂತ್ರ್ಯ ನೀಡಿದ ಮಹಾತ್ಮ ಗಾಂಧೀಜಿ ಅವರನ್ನ ಗೌರವಿಸದವರು ಬಂಗಾಳವನ್ನ ಅಭಿವೃದ್ಧಿ ಮಾಡ್ತಾರಾ ಎಂದು ಮಮತಾ ಬ್ಯಾನರ್ಜಿ ಪ್ರಶ್ನೆ ಮಾಡಿದರು.
ಅಮಿತ್ ಶಾ ಹೇಳಿದ್ದೇನು?: 43 ವರ್ಷಗಳ ಕಾಲ ರಾಜ್ಯದಲ್ಲಿ ಕಮ್ಯೂನಿಸ್ಟಗಳಿಗೆ ಅವಕಾಶ ನೀಡಿದ್ದೀರಿ. ಒಮ್ಮೆ ಬಿಜೆಪಿಗೆ ಬಂಗಾಳದ ಜನತೆ ಅವಕಾಶ ನೀಡಬೇಕಿದೆ. ಐದು ವರ್ಷದಲ್ಲಿ ರಾಜ್ಯವನ್ನ ಚಿನ್ನದ ಬಂಗಾಳವನ್ನಾವಿ ಮಾಡುತ್ತೇವೆ. ಇಷ್ಟು ದೊಡ್ಡ ಪ್ರಮಾಣದ ರೋಡ್ ಶೋ ನೋಡಿರಲಿಲ್ಲ. ಹಲವು ವರ್ಷಗಳ ಬಳಿಕ ಬಂಗಾಳದ ಜನತೆ ಬದಲಾವಣೆ ಬಯಸುತ್ತಿದ್ದಾರೆ ಎಂದು ಅಮಿತ್ ಶಾ ಹೇಳಿದ್ದರು.