ಮುಂಬೈ: ತನ್ನ ಫೋನ್ ಕರೆಯನ್ನು ನಿರಾಕರಿಸುತ್ತಿದ್ದಾಳೆ ಎಂದು ರೊಚ್ಚಿಗೆದ್ದ ಯುವಕನೋರ್ವ ತನ್ನ ಗೆಳತಿಗೆ ಚಾಕುವಿನಿಂದ ಇರಿದ ಘಟನೆ ಮುಂಬೈನಲ್ಲಿ ನಡೆದಿದೆ.
ಯುವಕನ್ನು ತೇಜಸ್ ಕೊಬ್ರೇಕರ್(28) ಎಂದು ಗುರುತಿಸಲಾಗಿದೆ. ಈತ ಲಿವಿಂಗ್ ರಿಲೇಶನ್ ಶಿಪ್ ನಲ್ಲಿದ್ದ ತನ್ನ 25 ವರ್ಷದ ಗೆಳತಿಗೆ ಚಾಕು ಇರಿದಿದ್ದಾನೆ. ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಯುವಕನ ಮೇಲೆ ಐಪಿಸಿ ಸೆಕ್ಷನ್ 307 (ಕೊಲೆ ಯತ್ನ) ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತೇಜಸ್ ಮದ್ಯವ್ಯಸನಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರ ಮಧ್ಯೆ ಆಗಾಗ ಕ್ಲುಲ್ಲಕ ಕಾರಣಕ್ಕೆ ಜಗಳವಾಗುತ್ತಿತ್ತು. ಅಲ್ಲದೆ ಅನೇಕ ಬಾರಿ ತೇಜಸ್, ಯುವತಿ ಮೇಲೆ ದೈಹಿಕ ಹಲ್ಲೆ ನಡೆಸಿದ್ದನು. ಇದರಿಂದ ಬೇಸತ್ತ ಯುವತಿ, ತೇಜಸ್ ನನ್ನು ಕಡೆಗಣಿಸುತ್ತಿದ್ದಳು. ಅಲ್ಲದೆ ಆತನ ಜೊತೆ ಮಾತನಾಡುವುದನ್ನು ಬಿಟ್ಟಿದ್ದಳು. ಇದರಿಂದ ರೊಚ್ಚಿಗೆದ್ದ ಯುವಕ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಂದು ಕಂಠಪೂರ್ತಿ ಮದ್ಯ ಸೇವಿಸಿ ಬಂದ ತೇಜಸ್, ಯುವತಿ ಜೊತೆ ವಾಗ್ವಾದಕ್ಕಿಳಿದಿದ್ದಾನೆ. ಈ ವೇಳೆ ಜಗಳ ತಾರಕಕ್ಕೇರಿ ಆತ, ಹಲವು ಬಾರಿ ಆಕೆಯ ಮೇಲೆ ಹಲ್ಲೆ ಮಾಡಿದ್ದ. ಹೀಗಾಗಿ ಆಕೆ, ತೇಜಸ್ ಜೊತೆ ಮಾತನಾಡುವುದನ್ನು ನಿಲ್ಲಿಸಿದ್ದಳು. ತೇಜಸ್ ಕರೆ ಸ್ವೀಕರಿಸಿದೆ ಕಡೆಗಣಿಸುತ್ತಿದ್ದಳು.
ಇದಾದ ಬಳಿಕ ಇಬ್ಬರು ನವೆಂಬರ್ 13 ರಂದು ಭೇಟಿಯಾಗಲು ನಿರ್ಧರಿಸಿದರು. ಹೀಗೆ ಭೇಟಿಯಾಗಲೆಂದು ಬಂದ ಯುವತಿಗೆ ಏಕಾಏಕಿ ಚೂರಿಯಿಂದ ಇರಿದಿದ್ದಾನೆ. ನಂತರ ಸ್ಥಳದಿಂದ ಪರಾರಿಯಾಗಿದ್ದಾನೆ. ಅಲ್ಲದೆ ಕಾಲೇಜೊಂದರ ಬಳಿ ತಾನೂ ಅದೇ ಚೂರಿಯಿಂದ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ.
ಇತ್ತ ಗಾಯಗೊಂಡಿರುವ ಯುವತಿಯನ್ನು ಗಮನಿಸಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಯುವತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.