ರಾಯಚೂರು: ಪ್ರೇಮ ವಿವಾಹಕ್ಕೆ ವಿರೋಧ ಹಿನ್ನೆಲೆ ಹಳೇ ವೈಷಮ್ಯದಿಂದ ರಾಯಚೂರಿನ ಸಿಂಧನೂರಿನ ಸುಕಾಲಪೇಟೆಯಲ್ಲಿ ನಡೆದ ಒಂದೇ ಕುಟುಂಬದ ಐವರ ಕಗ್ಗೊಲೆಯ ಲೈವ್ ದೃಶ್ಯದ ವಿಡಿಯೋ ವೈರಲ್ ಆಗಿದೆ.
ರಾಯಚೂರಿನ ಸಿಂಧನೂರಿನ ಐದು ಜನರ ಕೊಲೆ ಕೇಸ್ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ಕೊಲೆ ಮಾಡಿದ್ದ ದೃಶ್ಯದ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಕರುಣೆ ಇಲ್ಲದಂತೆ ಹಾಡಹಗಲೇ ನಡು ರಸ್ತೆಯಲ್ಲಿ ಆರೋಪಿಗಳು ಐವರನ್ನು ಕೊಚ್ಚಿಕೊಚ್ಚಿ ಕೊಲೆ ಮಾಡಿದ್ದಾರೆ. ಇದನ್ನು ಸ್ಥಳದಲ್ಲಿದ್ದವರು ಮೊಬೈಲಿನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದು, ಇದೀಗ ಈ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.
ಏನಿದು ಪ್ರಕರಣ:
ಮನೆಯವರ ವಿರೋಧದ ನಡುವೆ ಯುವತಿ ಮಂಜುಳ ಅದೇ ಬಡಾವಣೆಯ ಮೌನೇಶ್‍ನನ್ನು ಏಳು ತಿಂಗಳ ಕೆಳಗೆ ಮದುವೆಯಾಗಿದ್ದಳು. ಹುಡುಗನ ಮನೆಯಲ್ಲಿ ಮದುವೆಗೆ ಸಮ್ಮತಿಯಿದ್ದಿದ್ದರಿಂದ ಯಾವುದೇ ತೊಂದರೆಯಾಗಿರಲಿಲ್ಲ. ಆದರೆ ಯುವತಿ ಮಂಜುಳಾ ತಂದೆ ಫಕಿರಪ್ಪ ಎರಡನೇ ಮದುವೆಯಾಗಿ ಮೊದಲ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಇದನ್ನು ಪ್ರಶ್ನಿಸಲು ಮಂಜುಳಾ ತವರು ಮನೆಗೆ ಹೋದಾಗ ಗಲಾಟೆಯಾಗಿದೆ. ತಂದೆಯ ವಿರುದ್ಧ ಯುವತಿ ಪೊಲೀಸ್ ಠಾಣೆಗೆ ಹೋದಾಗ, ಮನೆಗೆ ಬಂದ ಆರೋಪಿಗಳು ಸಿಕ್ಕಸಿಕ್ಕವರನ್ನು ಕೊಚ್ಚಿಹಾಕಿದ್ದಾರೆ.
ಈ ಘಟನೆಯಲ್ಲಿ ಯುವಕನ ತಂದೆ ಈರಪ್ಪ, ತಾಯಿ ಸುಮಿತ್ರಾ, ಅಣ್ಣಂದಿರಾದ ಹನುಮೇಶ್, ನಾಗರಾಜ್ ಹಾಗೂ ಅತ್ತಿಗೆ ಶ್ರೀದೇವಿ ಸೇರಿ ಐದು ಜನ ಕೊಲೆಯಾಗಿದ್ದರು. ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆ ನಡೆದು ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.
ಮರಣೋತ್ತರ ಪರೀಕ್ಷೆ ಬಳಿಕ ಜೆಸಿಬಿ ಮೂಲಕ ಗುಂಡಿ ತೋಡಿ ಶವಗಳನ್ನ ಮುಚ್ಚಲಾಗಿತ್ತು. ಯುವತಿ ಸಂಬಂಧಿಕರಾದ ಅಂಬಣ್ಣ, ಸೋಮಶೇಖರ್, ಸಣ್ಣ ಫಕೀರಪ್ಪ, ರೇಖಾ, ಗಂಗಮ್ಮ ಬಂಧಿತ ಆರೋಪಿಗಳು.