ಚೆನ್ನೈ: ಕಳೆದ ವರ್ಷ ದೇಶಕ್ಕೆ ಕಾಲಿಟ್ಟ ಹೆಮ್ಮಾರಿ ಕೊರೊನಾದಿಂದಾಗಿ ಎಲ್ಲಾ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಇದೀಗ ಮೆಲ್ಲನೆ ಎಲ್ಲವೂ ಆರಂಭವಾಗುತ್ತಿದ್ದಂತೆ ಇತ್ತ ಕ್ರಿಕೆಟ್ ಪ್ರೇಮಿಗಳಿಗೆ ಶುಭ ಸುದ್ದಿ ಹೊರಬಿದ್ದಿದೆ. ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ನಲ್ಲಿ ಶೇ. 50ರಷ್ಟು ಪ್ರೇಕ್ಷಕರಿಗೆ ಪಂದ್ಯ ವೀಕ್ಷಿಸಲು ಅವಕಾಶ ಕಡೆಗೂ ಕೂಡಿ ಬಂದಿದೆ.

ಈಗಾಗಲೇ 2ನೇ ಟೆಸ್ಟ್ ಪಂದ್ಯಕ್ಕೆ ಕೇಂದ್ರ ಸರ್ಕಾರದಿಂದ ಶೇ. 50ರಷ್ಟು ಪ್ರೇಕ್ಷಕರಿಗೆ ಬರಲು ಅವಕಾಶ ಸಿಕ್ಕಿರುವ ಕಾರಣ ಟಿಕೆಟ್ ಮಾರಾಟವು ಪ್ರಾರಂಭಗೊಂಡಿದೆ. 2ನೇ ಟೆಸ್ಟ್ ವೇಳೆ 15 ಸಾವಿರ ಟಿಕೆಟ್ ಸಾರ್ವಜನಿಕರಿಗೆ ಮಾರಾಟವಾಗುವ ನಿರೀಕ್ಷೆ ಇದೆ. ಟಿಕೆಟ್‍ಗಳನ್ನು 3 ವಿಧಗಳಲ್ಲಿ ವರ್ಗಿಕರಿಸಲಾಗಿದ್ದು, 100, 150 ಮತ್ತು 200 ರೂಪಾಯಿ ಬೆಲೆಯ ಟಿಕೆಟ್‍ಗಳನ್ನು ಕೌಂಟರ್ ನಲ್ಲಿ ಮಾರಾಟ ಮಾಡದೆ ಪೇಟಿಂ ಆ್ಯಪ್‍ನ ಮೂಲಕ ಮಾರಾಟ ಮಾಡಲು ನಿರ್ಧರಿಸಲಾಗಿದೆ. ಈ ಮೂಲಕ ಪ್ರೇಕ್ಷಕರಿಗೆ ಸಂಪೂರ್ಣ ಅಟದ ರಸವತ್ತತೆಯನ್ನು ಸವಿಯುವ ಅವಕಾಶ ದೊರೆತಂತಾಗಿದೆ.


