– ಬ್ಲ್ಯಾಕ್ಮೇಲ್ ಮಾಡಿ ಅಪ್ರಾಪ್ತೆ ಮೇಲೆ ಯುವಕನಿಂದ ರೇಪ್
– ಪ್ರಿಯತಮನಿಗೆ ಫೋಟೋ ಕಳಿಸಿದ್ದೆ ತಪ್ಪಾಯ್ತು
ಚೆನ್ನೈ: 19 ವರ್ಷದ ಶ್ರೀಲಂಕಾದ ನಿರಾಶ್ರಿತನೊಬ್ಬ ಬ್ಲ್ಯಾಕ್ ಮೇಲ್ ಮಾಡಿ ಅಪ್ರಾಪ್ತ ಹುಡುಗಿಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿರುವ ಘಟನೆ ತಮಿಳುನಾಡಿನ ತಿರುಚಿ ಜಿಲ್ಲೆಯಲ್ಲಿ ನಡೆದಿದೆ.
ಆರೋಪಿಯನ್ನು ಜಿ. ಕಿಶಾಂತ್ ಎಂದು ಗುರುತಿಸಲಾಗಿದ್ದು, ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈತ ತಿರುಚಿ ಜಿಲ್ಲೆಯ ನಿರಾಶ್ರಿತರ ಶಿಬಿರದಲ್ಲಿ ವಾಸಿಸುತ್ತಿದ್ದನು.
ಏನಿದು ಪ್ರಕರಣ?
ಕೆಕೆ ನಗರ ಪ್ರದೇಶದಲ್ಲಿ ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಸಂತ್ರಸ್ತೆ ಆರೋಪಿಯನ್ನು ಭೇಟಿ ಮಾಡಿದ್ದಳು. ಈ ವೇಳೆ ಇಬ್ಬರಿಗೂ ಪರಿಚಯವಾಗಿ ಸಂತ್ರಸ್ತೆ ಆತನನ್ನು ಪ್ರೀತಿಸುತ್ತಿದ್ದಳು. ಹೀಗಾಗಿ ಇಬ್ಬರು ಪ್ರತಿದಿನ ಭೇಟಿ ಮಾಡುತ್ತಿದ್ದರು. ಈ ವೇಳೆ ಆರೋಪಿ ಸಂತ್ರಸ್ತೆಯನ್ನು ತನ್ನ ಫೋಟೋಗಳನ್ನು ಕಳುಹಿಸುವಂತೆ ಒತ್ತಾಯಿಸಿದ್ದಾನೆ. ಅದರಂತೆಯೇ ಸಂತ್ರಸ್ತೆ ಆತನಿಗೆ ತನ್ನ ಫೋಟೋಗಳನ್ನು ಕಳುಹಿಸಿದ್ದಾಳೆ. ಅಲ್ಲದೇ ಅನೇಕ ಬಾರಿ ಸಂತ್ರಸ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಮಹಿಳಾ ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ಆರೋಪಿ ಸಂತ್ರಸ್ತೆ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕುವ ಮೂಲಕ ಬ್ಲ್ಯಾಕ್ಮೇಲ್ ಮಾಡುತ್ತಿದ್ದನು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಮಂಗಳವಾರ ಆರೋಪಿ ಕಿಶಾಂತ್ ರೈಲ್ವೆ ನಿಲ್ದಾಣದಲ್ಲಿ ತನ್ನನ್ನು ಭೇಟಿಯಾಗುವಂತೆ ಸಂತ್ರಸ್ತೆಗೆ ಹೇಳಿದ್ದಾನೆ. ಇದರಿಂದ ಭಯಗೊಂಡಿದ್ದ ಮಗಳನ್ನು ನೋಡಿದ ಪೋಷಕರು ವಿಚಾರಿಸಿದ್ದಾರೆ. ಆಗ ಸಂತ್ರಸ್ತೆ ನಡೆದ ಘಟನೆಯ ಬಗ್ಗೆ ವಿವರಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಚಾರ ತಿಳಿದು ಸಂತ್ರಸ್ತೆಯ ಸಹೋದರಿ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ತಕ್ಷಣ ಪೊಲೀಸರು ಈ ಕುರಿತು ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯಕ್ಕೆ ಆತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.