ಉಡುಪಿ: ಜಿಲ್ಲೆಯಲ್ಲಿ ಸುರಿದ ಮಹಾಮಳೆ ಅವಾಂತರವನ್ನೇ ಸೃಷ್ಟಿಸಿದೆ. ಸುವರ್ಣ ನದಿ ತೀರದಲ್ಲಿ ಹತ್ತಾರು ಮನೆಗಳು ನೆಲಸಮವಾಗಿದೆ. ಹಿರಿಯಡ್ಕದ ಮಾಣೈ ಪರಿಸರ ನೆರೆಗೆ ಮೊದಲು ತುತ್ತಾದ ಗ್ರಾಮ. ಈ ಭಾಗದಲ್ಲಿ ಮೂರು ಮನೆಗಳು ಕುಸಿದು ಬಿದ್ದಿದ್ದು, ಮನೆಯಲ್ಲಿ ಮಲಗಿದ್ದವರು ಉಟ್ಟ ಬಟ್ಟೆಯಲ್ಲಿ ಹೊರಬಂದು ಎಲ್ಲವನ್ನೂ ಕಳೆದುಕೊಂಡಿದ್ದಾರೆ.
ಮಾಣೈನ ಪಮ್ಮು ಕುಲಾಲ್ತಿ ಎಂಬವರ ಮನೆ ಸಂಪೂರ್ಣ ಕುಸಿದಿದೆ. ಕಳೆದ ವರ್ಷ ಬೆಳೆದ ಅಕ್ಕಿ, ಕೊಟ್ಟಿಗೆಯಲ್ಲಿ ಇಡೀ ವರ್ಷಕ್ಕೆ ಬೇಕಾಗುವಷ್ಟು ಒಣಹುಲ್ಲು, ಜಮೀನಿನ ದಾಖಲೆಗಳು, ಚಿನ್ನ-ಹಣ ಎಲ್ಲವೂ ಮಣ್ಣಿನಡಿ ಸೇರಿದೆ. ಈ ಹಿಂದೆ ಅಂಗಳದ ತನಕ ನೀರು ಬರುತ್ತಿತ್ತು. ಆದರೆ ಈ ಬಾರಿ ಸಂಪೂರ್ಣವಾಗಿ ಮನೆ ಮುಳುಗಡೆಯಾಗಿದೆ ಎಂದು ಮನೆಯವರು ಕಣ್ಣೀರಿಟ್ಟಿದ್ದಾರೆ. ಲಕ್ಷ್ಮಣ ಕುಲಾಲ ಅವರ ಮನೆಯ ಒಂದು ಭಾಗ ಬಿದ್ದಿದ್ದು ಮನೆಗೆ ಹಾನಿಯಾಗಿದೆ ಆಗಿದೆ.
Advertisement
Advertisement
ಜಗ್ಗು ಕುಲಾಲ್, ಸುಂದರ, ಉದಯ ಎಂಬವರ ಮನೆಯೂ ಹಾನಿಗೀಡಾಗಿದೆ. ನೋಡನೋಡುತ್ತಿದ್ದಂತೆ ಕಣ್ಣೆದುರೇ ಮನೆ ಕುಸಿದು ಬಿದ್ದಿರುವುದನ್ನು ನೆನೆದು ಮನೆಮಂದಿ ದಿಗ್ಬ್ರಾಂತಿಗೊಳಗಾಗಿದ್ದಾರೆ. ಉಟ್ಟ ಬಟ್ಟೆಯಲ್ಲೇ 8 ಕುಟುಂಬಗಳು ಸುರಕ್ಷಿತ ಕೇಂದ್ರಕ್ಕೆ ಶಿಫ್ಟ್ ಆಗಿವೆ. ದನಕರುಗಳನ್ನು ರಾತ್ರೋರಾತ್ರಿ ಎತ್ತರಪ್ರದೇಶಕ್ಕೆ ರವಾನೆ ಮಾಡಿದ್ದರಿಂದ ಅವುಗಳ ಪ್ರಾಣ ಉಳಿದಿದೆ. ಉಳಿದ ಮೂರು ಮನೆಗಳು ಭಾರಿ ನೆರೆ ನೀರಿಗೆ ತೋಯ್ದು ಹೋಗಿದ್ದು ಗೋಡೆಗಳು ಬಿರುಕು ಬಿಟ್ಟಿದೆ. ಸ್ಥಳೀಯ ಪಂಚಾಯತ್ ಅಧಿಕಾರಿಗಳು ಜನಪ್ರತಿನಿಧಿಗಳು ಭೇಟಿ ಕೊಟ್ಟು ಸೂಕ್ತ ಪರಿಹಾರ ತಿಳಿಸಿ ಕೊಡುವ ಭರವಸೆ ನೀಡಿದ್ದಾರೆ.
Advertisement
Advertisement
ಈ ಬಾರಿಯ ಭತ್ತದ ಬೇಸಾಯ ಕೂಡ ಸಂಪೂರ್ಣವಾಗಿ ಮಳೆನೀರಿಗೆ ಕೊಚ್ಚಿಹೋಗಿದೆ. ಕೂಡಿಟ್ಟ ತರಗೆಲೆ, ಒಣಹುಲ್ಲಿನ ಮೂಟೆ ತನಕ ಸ್ವರ್ಣ ನದಿ ಹರಿದಿದ್ದು ಅಪಾರ ಪ್ರಮಾಣದ ನಷ್ಟವಾಗಿದೆ ಎಂದು ಕುಟುಂಬಗಳು ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಪಮ್ಮು ಕುಲಾಲ್ತಿ, ಕಣ್ಣಮುಂದೆ ಕಟ್ಟಿದ ಮನೆ ಕುಸಿದು ಬಿದ್ದಾಗ ಪ್ರಾಣವೇ ಹೋದಂತಾಯಿತು. ಮುಂದೆ ಏನು ಮಾಡುವುದು ಗೊತ್ತಿಲ್ಲ. ಮನೆಯ ಒಳಗೆ ಇದ್ದ ಬಟ್ಟೆ, ಟಿವಿ, ಕಪಾಟು-ಅಕ್ಕಿ ಚಿನ್ನ ಎಲ್ಲವೂ ಮಣ್ಣು ಪಾಲಾಗಿದೆ. ಮತ್ತೆ ಅದನ್ನೆಲ್ಲ ಸಂಪಾದನೆ ಮಾಡುವ ಶಕ್ತಿ ನಮಗೆ ಇಲ್ಲ. ನಮ್ಮ ಪ್ರಾಣ ಉಳಿದಿದೆ ಅನ್ನೋದು ಬಿಟ್ಟು ಎಲ್ಲವನ್ನೂ ಕಳೆದುಕೊಂಡಿದ್ದೇವೆ ಎಂದರು.