ಬಾಗಲಕೋಟೆ: ಮಲಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಜನರಿಗಷ್ಟೇ ಅಲ್ಲ, ಜಲಚರಗಳಿಗೂ ಆತಂಕ ಮೂಡಿಸಿದೆ. ಮಲಪ್ರಭಾ ನದಿಯಲ್ಲಿ ತೇಲುತ್ತಾ ಹೋಗುತ್ತಿದ್ದ ನವಿಲನ್ನು ರಕ್ಷಣೆ ಮಾಡಲಾಗಿದೆ.
ಮಲಪ್ರಭೆ ಜಿಲ್ಲೆಯ ಬಾದಾಮಿ ತಾಲೂಕಿನ ಚೊಳಚಗುಡ್ಡ ಅಂತರ್ ಜಿಲ್ಲಾ ಸೇತುವೆ ಬಳಿ ಭಾರೀ ರಭಸದಿಂದ ನೀರು ಹರಿಯುತ್ತಿದೆ. ಈ ಪ್ರವಾಹ ಭೀತಿ ರಾಷ್ಟ್ರಪಕ್ಷಿಗೂ ತಟ್ಟಿದೆ. ಮಲಪ್ರಭಾ ನದಿಯ ನಡುಗಡ್ಡೆಯಲ್ಲಿ ಸಿಲುಕಿ ನವಿಲೊಂದು ನರಳಾಡುತ್ತಿತ್ತು.
ಹಾರಲು ಸುತ್ತಲೂ ಯಾವುದೇ ಸ್ಥಳವಿಲ್ಲದೆ, ಮುಳ್ಳಿನ ಕಂಟಿಯಲ್ಲೇ ಸುಮಾರು ಹೊತ್ತು ಕುಳಿತಿತ್ತು. ನಂತರ ಹಾರಲು ಹೋಗಿ ಮಲಪ್ರಭಾ ನದಿಯಲ್ಲಿ ತೇಲುತ್ತಾ ಸಾವು ಬದುಕಿನ ಮಧ್ಯೆ ನವಿಲು ಹೋರಾಟ ನಡೆಸುತ್ತಿತ್ತು. ನವಿಲಿನ ಪರಿಸ್ಥಿತಿ ಕಂಡು ಸ್ಥಳದಲ್ಲಿದ್ದ ಇಬ್ಬರು ಚೊಳಚಗುಡ್ಡ ಸೇತುವೆ ಬಳಿ ಪ್ರಾಣದ ಹಂಗು ತೊರೆದು ರಾಷ್ಟ್ರ ಪಕ್ಷಿ ನವಿಲನ್ನು ರಕ್ಷಣೆ ಮಾಡಿದ್ದಾರೆ.