– ಎಲ್ಲ ಪ್ರವಾಸಿಗರಿಗೂ 72 ಗಂಟೆಯೊಳಗಿನ ಕೊರೊನಾ ನೆಗೆಟಿವ್ ವರದಿಗೆ ಆಗ್ರಹ
ಚಿಕ್ಕಮಗಳೂರು: ಕೇವಲ ಕೇರಳ, ಮಹಾರಾಷ್ಟ್ರದ ಪ್ರವಾಸಿಗರಿಗೆ ಮಾತ್ರವಲ್ಲದೆ ತಾಲೂಕಿನ ಮುಳ್ಳಯ್ಯನಗಿರಿಗೆ ಬರುವ ಪ್ರತಿಯೊಬ್ಬ ಪ್ರವಾಸಿಗರಿಗೂ 72 ಗಂಟೆಯೊಳಗಿನ ಕೊರೊನಾ ನೆಗೆಟಿವ್ ವರದಿ ಕಡ್ಡಾಯಗೊಳಿಸಿ ಅಥವಾ ಜಿಲ್ಲೆಗೆ ಪ್ರವಾಸಿಗರನ್ನು ನಿರ್ಬಂಧಿಸಿ ಎಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ವಿವಿಧ ಸಂಘಟನೆಗಳು ತಾಲೂಕಿನ ಕೈಮರ ಚೆಕ್‍ಪೋಸ್ಟ್ ಬಳಿ ಪ್ರತಿಭಟನೆ ನಡೆಸಿದರು. ಈ ವೇಳೆ 2 ಕಿ.ಮೀ.ಗೂ ಅಧಿಕ ದೂರ ವಾಹನಗಳು ಸಾಲುಗಟ್ಟಿ ನಿಂತಿದ್ದು, ಫುಲ್ ಟ್ರಾಫಿಕ್ ಜಾಮ್ ಉಂಟಾಗಿತ್ತು.
Advertisement
ಪ್ರತಿಭಟನಾಕಾರರು ಚೆಕ್‍ಪೋಸ್ಟ್ ಬಳಿ ಗೇಟ್ ಕ್ಲೋಸ್ ಮಾಡಿ, ವಾಹನಗಳನ್ನ ಅಡ್ಡಗಟ್ಟಿ, ಗೇಟಿಗೆ ಅಡ್ಡ ಕುಳಿತ ಪರಿಣಾಮ ಸುಮಾರು ಎರಡು ಕಿ.ಮೀ. ದೂರದಷ್ಟು ವಾಹನಗಳು ಸಾಲುಗಟ್ಟಿ ನಿಂತು ಟ್ರಾಫಿಕ್ ಜಾಮ್ ಉಂಟಾಗಿತ್ತು. ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ದತ್ತಪೀಠ, ಮಾಣಿಕ್ಯಾಧಾರ, ಗಾಳಿಕೆರೆ, ಹೊನ್ನಮ್ಮನಹಳ್ಳ, ಸಗೀರ್ ಫಾಲ್ಸ್ ಸೇರಿದಂತೆ ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಇಂದು ಕೂಡ ಸುಮಾರು 1 ಸಾವಿರಕ್ಕೂ ಅಧಿಕ ವಾಹನಗಳಲ್ಲಿ ಸಾವಿರಾರು ಪ್ರವಾಸಿಗರು ಭೇಟಿ ನೀಡಿದ್ದರು. ಹೀಗೆ ಬೇಕಾಬಿಟ್ಟಿ ಬರುವ ಪ್ರವಾಸಿಗರಿಂದ ಜಿಲ್ಲೆಯಲ್ಲಿ ಕೊರೊನಾ ಮತ್ತಷ್ಟು ಉಲ್ಭಣಗೊಳ್ಳಬಹುದು ಎಂದು ಪ್ರತಿಭಟನಾಕಾರರು ಪ್ರವಾಸಿಗರನ್ನ ಅಡ್ಡಗಟ್ಟಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಇಲ್ಲಿಗೆ ಬರುವ ಪ್ರತಿಯೊಬ್ಬ ಪ್ರವಾಸಿಗರಿಗೂ ಕೊರೊನಾ ಟೆಸ್ಟ್ ಮಾಡಿಸಿ, ಇಲ್ಲವೇ 72 ಗಂಟೆಯೊಳಗಿನ ಕೊರೊನಾ ನೆಗೆಟಿವ್ ವರದಿಯನ್ನು ಕಡ್ಡಾಯಗೊಳಿಸಿ ಅಥವಾ ಜಿಲ್ಲೆಗೆ ಪ್ರವಾಸಿಗರನ್ನು ಸಂಪೂರ್ಣ ನಿಷೇಧಗೊಳಿಸಿ ಎಂದು ಆಗ್ರಹಿಸಿದರು.
Advertisement
Advertisement
ಕೊರೊನಾ ಮೂರನೇ ಆತಂಕವಿದೆ. ದೇಶದ ಕೆಲ ಭಾಗದಲ್ಲಿ ತನ್ನ ಅಬ್ಬರವನ್ನು ಮುಂದುವರೆಸಿದ್ದು, ರಾಜ್ಯದಲ್ಲೂ ಕ್ರಮೇಣ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಮಧ್ಯೆ ಪ್ರವಾಸಿ ತಾಣಗಳತ್ತ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಲಗ್ಗೆ ಇಡುತ್ತಿದ್ದಾರೆ. ಇದು ಜಿಲ್ಲೆಯ ಜನರನ್ನ ಆತಂಕಕ್ಕೆ ದೂಡಿದೆ. ಜಿಲ್ಲೆಯಲ್ಲಿ ಮಳೆ ನಿರಂತರವಾಗಿದೆ. ಶೀತದ ವಾತಾವರಣವೂ ಇದೆ. ಶೀತ, ಕೆಮ್ಮು, ಜ್ವರವೆಂದು ಆಸ್ಪತ್ರೆಗೆ ಹೋದರೆ ವೈದ್ಯರು ಕೊರೊನಾ ಎನ್ನುತ್ತಾರೆ ಎಂದು ಜನ ಭಯಭೀತರಾಗಿದ್ದಾರೆ. ಹಾಗಾಗಿ, ಬೇಕಾಬಿಟ್ಟಿ ಬರುವ ಪ್ರವಾಸಿಗರಿಂದ ಕೊರೊನಾ ಹರಡಬಹುದು. ಹೀಗಾಗಿ ರಾಜ್ಯದ ಇತರ ಜಿಲ್ಲೆಗಳಿಂದ ಬರುವ ಪ್ರವಾಸಿಗರಿಗೂ 72 ಗಂಟೆಯೊಳಗಿನ ನೆಗೆಟಿವ್ ವರದಿ ಕಡ್ಡಾಯ ಮಾಡಬೇಕೆಂದು ಪಟ್ಟು ಹಿಡಿದು ಕೈ ಕಾರ್ಯಕರ್ತರು ಚೆಕ್ ಪೋಸ್ಟ್ ಬಳಿ ಪ್ರತಿಭಟನೆ ನಡೆಸಿದರು.
Advertisement
ಸುಮಾರು 2 ಕಿ.ಮೀ. ಟ್ರಾಫಿಕ್ ಜಾಮ್ ಉಂಟಾಗಿದ್ದರಿಂದ ನೂರಾರು ಕಾರುಗಳಲ್ಲಿದ್ದ ಸಾವಿರಾರು ಜನ ವಾಹನ ದಟ್ಟಣೆಯಿಂದ ಪರದಾಡುವಂತಾಗಿತ್ತು. ಬೆಳ್ಳಂಬೆಳಗ್ಗೆಯೇ ಬಂದಿದ್ದ ಜನ ಮುಂದೆ ಹೋಗಲಾಡದೆ ಪರದಾಡಿದರು. ವಾರಾಂತ್ಯದಲ್ಲಿ ಪ್ರಕೃತಿ ಮಡಿಲಲ್ಲಿ ಜಾಲಿ ಮಾಡಬೇಕು ಅಂತ ಜಾಲಿ ಮೂಡಲ್ಲಿ ಬಂದಿದ್ದ ಪ್ರವಾಸಿಗರಿಗೆ ಗಿರಿ ಬಾಗಿಲಲ್ಲೇ ಮೂಡ್ ಔಟ್ ಆಗಿತ್ತು.
ಬಳಿಕ ಸ್ಥಳಕ್ಕೆ ಬಂದ ಪೊಲೀಸರು ನೀವು ಅನುಮತಿ ಪಡೆದು ಪ್ರತಿಭಟನೆ ಮಾಡಿ, ನಾವೇ ಬಂದು ಸೆಕ್ಯೂರಿಟಿ ನೀಡುತ್ತೇವೆ. ಹೀಗೆ ಏಕಾಏಕಿ ಬಂದ್ ಮಾಡಿದರೆ ವಾಹನ ಸವಾರರಿಗೆ ಕಷ್ಟ ಆಗುತ್ತೆ ಎಂದು ಪ್ರತಿಭಟನಾಕಾರರನ್ನು ಜೀಪಿಗೆ ತುಂಬಲು ಪ್ರಯತ್ನಿಸಿದರು. ಈ ವೇಳೆ ಪ್ರವಾಸಿಗರ ಎದುರು ಕೈಮರ ಚೆಕ್‍ಪೋಸ್ಟ್‍ನಲ್ಲಿ ಹೈಡ್ರಾಮವೇ ನಡೆಯಿತು. ಪೊಲೀಸರು ಕಾಂಗ್ರೆಸ್ ಮುಖಂಡ ರಸೂಲ್ ಖಾನ್‍ನನ್ನ ಗ್ರಾಮಾಂತರ ಸರ್ಕಲ್ ಇನ್ಸ್‍ಪೆಕ್ಟರ್ ಸ್ವರ್ಣ ಸೇರಿದಂತೆ ಸಿಬ್ಬಂದಿಗಳು ಗಾಡಿಗೆ ತುಂಬಲು ಹರಸಾಹಸ ಪಟ್ಟರು. ಈ ವೇಳೆ ತಳ್ಳಾಟ, ನೂಕಾಟವೂ ನಡೆಯಿತು. ಅಂತಿಮವಾಗಿ ಪೆÇಲೀಸರು ಕಾಂಗ್ರೆಸ್ ಮುಖಂಡ ರಸೂಲ್ ಖಾನ್ ಸೇರಿದಂತೆ ಅನೇಕರನ್ನ ವಶಕ್ಕೆ ಪಡೆದು ಕರೆದೊಯ್ದರು. ಸುಮಾರು ಎರಡು ಗಂಟೆಗಳ ಕಾಲ ರಸ್ತೆ ಮಧ್ಯೆ ನಿಂತು ಸುಸ್ತಾಗಿದ್ದ ಪ್ರವಾಸಿಗರು ನಿಟ್ಟುಸಿರು ಬಿಟ್ಟು ಗಿರಿಯತ್ತ ಹೊರಟರು.