ರಾಯಚೂರು: ಕೋವಿಡ್ ನಿಯಮಗಳ ಕಠಿಣ ಪಾಲನೆಯಿಂದ ಮಾತ್ರ ಸೋಂಕು ಹರಡುವಿಕೆ ತಡೆಗಟ್ಟಲು ಸಾಧ್ಯ. ಪ್ರಭಾವಿ ಜನಗಳ ಒತ್ತಡಗಳಿಗೆ ಮಣಿದು ಯಾರೂ ಕೋವಿಡ್ ನಿಯಮಗಳ ಸಡಿಲಿಕೆಗೆ ಅವಕಾಶ ಕೊಡಬಾರದು ಅಂತ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ರಾಯಚೂರಿನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರೊಂದಿಗೆ ಕೋವಿಡ್ ನಿಯಂತ್ರಣ ಕುರಿತು ಸಭೆ ಹಾಗೂ ತಾಲೂಕು ಪಂಚಾಯತ ಅಧಿಕಾರಿಗಳು, ಜನಪ್ರತಿನಿಧಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು. ಆಶಾ ಕಾರ್ಯಕರ್ತರಿಗೆ, ಕೋವಿಡ್ ವಾರಿಯರ್ಸ್ ಗೆ ಸುರಕ್ಷತೆ ಒದಗಿಸಲು ಸೂಚನೆ ನೀಡಿದರು. ಜಾತ್ರೆ ,ಸಮಾರಂಭಗಳಿಗೆ ಅವಕಾಶ ಕೊಡದಂತೆ ಪಿಡಿಓ, ಗ್ರಾಪಂ ಅಧ್ಯಕ್ಷರಿಗೆ ಹೇಳಿದರು.
ಜಿಲ್ಲೆಯಲ್ಲಿ 448 ಜೀರೋ ಪಾಸಿಟಿವ್ ಪ್ರಕರಣಗಳಿರುವ ಗ್ರಾಮಗಳು, 370 ಗ್ರಾಮಗಳಲ್ಲಿ 0-5 ಪ್ರಕರಣಗಳಿರುವ ಬಗ್ಗೆ ಮಾಹಿತಿ ಪಡೆದು ಅಧಿಕಾರಿಗಳನ್ನ ಶ್ಲಾಘಿಸಿದರು. ಜೊತೆಗೆ ಜಿಲ್ಲೆಯಲ್ಲಿ ಲಾಕ್‍ಡೌನ್ ಸಡಲಿಕೆ ಕೇವಲ ಒಂದೇ ದಿನ ಮಾಡಬಾರದು ಅಂತ ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು. ವಾರದಲ್ಲಿ ಒಂದು ದಿನ ಮಾತ್ರ ಸಡಿಲಿಕೆ ಮಾಡುವುದರಿಂದ ಜನರ ಓಡಾಟ ಹೆಚ್ಚಾಗಿದೆ. ಪ್ರತಿದಿನ ಸ್ವಲ್ಪ ಹೊತ್ತು ಅಗತ್ಯವಸ್ತು ಖರೀದಿಗೆ ಅವಕಾಶ ಕೊಡಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಇನ್ನೂ ಕಡಿಮೆಯಾಗಲಿದೆ ಅಂತ ಹೇಳಿದರು. ಇನ್ನೂ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹೊಲಗಾಲುವೆಗಳ ಹೂಳು ತೆಗೆಯುವ ಕೆಲಸ ಕೈಗೆತ್ತಿಕೊಳ್ಳುವಂತೆ ಈಶ್ವರಪ್ಪ ಆದೇಶ ನೀಡಿದರು.
ಸಭೆಯಲ್ಲಿ ಸಂಸದರಾದ ಕರಡಿ ಸಂಗಣ್ಣ, ಅಮರೇಶ್ವರ ನಾಯಕ್, ಶಾಸಕರಾದ ವೆಂಕಟರಾವ್ ನಾಡಗೌಡ, ಡಾ.ಶಿವರಾಜ್ ಪಾಟೀಲ್, ವೆಂಕಟಪ್ಪ ನಾಯಕ್,ರಾಜೂಗೌಡ ,ಜಿಲ್ಲಾಧಿಕಾರಿ ಆರ್ .ವೆಂಕಟೇಶ ಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.