ಬೆಂಗಳೂರು: ಪ್ರಧಾನ ಮಂತ್ರಿ ಕಚೇರಿ ವಿಸಿಟಿಂಗ್ ಕಾರ್ಡ್ ಬಳಸಿ ಸಿಲಿಕಾನ್ ಸಿಟಿಯ ಐಷಾರಾಮಿ ಹೋಟೆಲ್‍ನಲ್ಲಿ ವಾಸ್ತವ್ಯ ಹೂಡಿ ಆರೋಪಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಉತ್ತರ ಪ್ರದೇಶ ಮೂಲದ ಅನಿಕೇತ್ ಬಂಧಿತ ಆರೋಪಿ, ನಗರದ ಐಟಿಸಿ ಗಾರ್ಡೇನಿಯಾ ಹೋಟೆಲ್‍ನಲ್ಲಿ ಆರೋಪಿ ರೂಮ್ ಬುಕ್ ಮಾಡಿದ್ದ. ನ್ಯಾಷನಲ್ ಸೆಕ್ಯೂರಿಟಿ ಕೌನ್ಸಿಲ್ ಆಫ್ ಇಂಡಿಯಾದ ಯೂತ್ ಅಡ್ವೈಸರ್ ಎಂದು ವಿಸಿಟಿಂಗ್ ಕಾರ್ಡ್ ತೋರಿಸಿ ಆರೋಪಿ ಹೋಟೆಲ್‍ನಲ್ಲಿ ಉಳಿದುಕೊಂಡಿದ್ದ. ಜೂನ್ 16 ರಿಂದ 20ರ ವರೆಗೆ ಐಷಾರಾಮಿ ಹೋಟೆಲ್ ನಲ್ಲಿ ಈತ ವಾಸ್ತವ್ಯ ಹೂಡಿದ್ದ.
ಅನುಮಾನಗೊಂಡ ಹೋಟೆಲ್‍ನವರು, ಕಬ್ಬನ್ ಪಾರ್ಕ್ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಕಬ್ಬನ್ ಪಾರ್ಕ್ ಪೊಲೀಸರು ಪ್ರಧಾನಿ ಕಚೇರಿಗೆ ಪತ್ರ ಬರೆದು ಪರಿಶೀಲನೆ ನಡೆಸಿದಾಗ ಈತ ನಕಲಿ ಎಂಬುದು ಬೆಳಕಿಗೆ ಬಂದಿದೆ. ಸತತ ಒಂದು ತಿಂಗಳ ಕಾಲ ತನಿಖೆ ನಡೆಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ಬಂಧನದ ವಿಚಾರ ತಿಳಿದು ಕೇಂದ್ರದ ಐಬಿ(ಇಂಟಲಿಜೆನ್ಸ್ ಬ್ಯೂರೋ) ಮತ್ತು ಎಫ್‍ಆರ್‍ಆರ್‍ಒ ತಂಡಗಳು ಭೇಟಿ ನೀಡಿದ್ದು, ಎರಡೂ ತಂಡಗಳು ಆರೋಪಿಯನ್ನು ತೀವ್ರ ವಿಚಾರಣೆಗೊಳಪಡಿಸಿವೆ.