– ಪ್ರಾಯೋಗಿಕ ಪರೀಕ್ಷೆಗಳು ನಡೆಯಲಿವೆ
ಬೆಂಗಳೂರು: ಕೊರೊನಾ ಎರಡನೇ ಅಲೆ ಹಿನ್ನೆಲೆ ಸರ್ಕಾರದಿಂದ ಕಠಿಣ ಮಾರ್ಗಸೂಚಿ ಜಾರಿ ಮಾಡಲಾಗಿದ್ದು, ಹೀಗಾಗಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ ತರಗತಿಗಳನ್ನು ಬಂದ್ ಮಾಡಿ ಪಿಯು ಬೋರ್ಡ್ ಆದೇಶ ಹೊರಡಿಸಿದೆ.
ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿಗಳನ್ನು ನಿಲ್ಲಿಸುವಂತೆ ಸೂಚಿಸಲಾಗಿದ್ದು, ದ್ವಿತೀಯ ಪಿಯುಸಿ ಪೂರ್ವ ಸಿದ್ಧತಾ ಪರೀಕ್ಷೆಯನ್ನೂ ಪಿಯು ಬೋರ್ಡ್ ಸ್ಥಗಿತಗೊಳಿಸಿದೆ. ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಪತ್ರಿಕೆಗಳಾಗಿ ವಿದ್ಯಾರ್ಥಿಗಳಿಗೆ ನೀಡಲು ಸೂಚನೆ ನೀಡಲಾಗಿದೆ. ಆನ್‍ಲೈನ್ ಹಾಗೂ ಪ್ರೀ ರೆಕಾರ್ಡ್ ತರಗತಿಗಳನ್ನು ಮುಂದುವರೆಸಲು ತಿಳಿಸಲಾಗಿದೆ.
ಏಪ್ರಿಲ್ 28 ರಿಂದ ಮೇ 5 ರವರೆಗೆ ನಿಗದಿಯಾಗಿರುವ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳು ಎಂದಿನಂತೆ ನಡೆಯಲಿವೆ. ಪರೀಕ್ಷೆ ವೇಳೆ ಶೇ.50ರಷ್ಟು ಉಪನ್ಯಾಸಕರು ಕಡ್ಡಾಯವಾಗಿ ಹಾಜರಿರಬೇಕು. ಈ ಕುರಿತು ಪ್ರಾಂಶುಪಾಲರು ಸೂಕ್ತ ವೇಳಾಪಟ್ಟಿ ತಯಾರಿಸುವಂತೆ ಪಿಯು ಬೋರ್ಡ್ ಆದೇಶದಲ್ಲಿ ತಿಳಿಸಲಾಗಿದೆ.