ಉಡುಪಿ: ದೇಶಾದ್ಯಂತ ಕೊರೊನಾ ಆವರಿಸಿದ್ದು, ಆರ್ಥಿಕವಾಗಿ ಸಮಸ್ಯೆಯಲ್ಲಿರುವ ಪೋಷಕರು ತಮ್ಮ ಮಕ್ಕಳ ಫೀಸ್ ಕಟ್ಟಲಾಗದೆ ಸಂಕಷ್ಟದಲ್ಲಿದ್ದಾರೆ. ಈ ನಡುವೆ ಉಡುಪಿ ಜಿಲ್ಲೆ ಬೈಂದೂರು ಶಾಸಕ ಸುಕುಮಾರ ಶೆಟ್ಟಿ, ಈ ವರ್ಷ ತಮ್ಮ ಶಿಕ್ಷಣ ಸಂಸ್ಥೆಗಳ 70 ಲಕ್ಷ ಫೀಸ್ ಮನ್ನಾ ಮಾಡಲು ನಿರ್ಧಾರ ಮಾಡಿದ್ದಾರೆ.
ಕಳೆದ ವರ್ಷದ ಒಂದೂವರೆ ಕೋಟಿ ಫೀಸ್ ಮಕ್ಕಳಿಂದ ಬಾಕಿಯಿದೆ. ಮಕ್ಕಳಿಗೆ ನಾವು ಶುಲ್ಕಕ್ಕಾಗಿ ಯಾವತ್ತೂ ಒತ್ತಡ ಹೇರಿಲ್ಲ. ಈ ಬಾರಿ ಫೀಸ್ ಶುಲ್ಕದ ಪೈಕಿ 70 ಲಕ್ಷ ರುಪಾಯಿ ಮನ್ನಾ ಮಾಡ್ತೇವೆ. ಕುಂದಾಪುರ ಎಜುಕೇಶನ್ ಸೊಸೈಟಿ ಅಧ್ಯಕ್ಷರಾಗಿರುವ ಅವರು, ನಾಲ್ಕು ಶಿಕ್ಷಣ ಸಂಸ್ಥೆ ಹೊಂದಿದ್ದಾರೆ. ಪ್ರಾಥಮಿಕದಿಂದ ಪದವಿವರೆಗೆ ನಾಲ್ಕು ಸಂಸ್ಥೆಗಳನ್ನು ಟ್ರಸ್ಟ್ ಮೂಲಕ ನಡೆಸುತ್ತಿದ್ದಾರೆ.
Advertisement
Advertisement
ಸಮಾಜದ ಕಟ್ಟ ಕಡೆಯ ಕುಟುಂಬದ ಮಕ್ಕಳಿಗೆ ಫೀಸ್ ತೆಗೆದುಕೊಳ್ಳಲ್ಲ. ಅನಾಥ ಮಕ್ಕಳಿಗೆ ಉಚಿತ ಶಿಕ್ಷಣ ಕೊಡುತ್ತೇವೆ. ಕೆಲ ಕುಟುಂಬಗಳಿಗೆ ಅರ್ಧ ಫೀಸ್ ತೆಗೆದುಕೊಳ್ಳುತ್ತೇವೆ. ಶ್ರೀಮಂತರ ಮಕ್ಕಳಿಗೆ ಫುಲ್ ಫೀಸ್ ಎಂದು ಬೈಂದೂರು ಬಿಜೆಪಿ ಶಾಸಕ ಸುಕುಮಾರ ಶೆಟ್ಟಿ ಹೇಳಿದ್ದಾರೆ. ಶಿಕ್ಷಣ ಗುಣಮಟ್ಟ ವಿಚಾರದಲ್ಲಿ ರಾಜಿ ಇಲ್ಲ. ಒತ್ತಡ ಹೇರಿ, ಬಲವಂತವಾಗಿ ಫೀಸ್ ಕಿತ್ತುಕೊಳ್ಳುವ ಪರಿಪಾಠ ಹಿಂದಿನಿಂದಲೇ ಇಲ್ಲ. ಮುಂದೆಯೂ ಮಾಡದಂತೆ ಸಿಬ್ಬಂದಿಗೆ ಸೂಚಿಸಿರುವುದಾಗಿ ಶಾಸಕರು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದರು.
Advertisement
Advertisement
ನಮ್ಮ ನಾಲ್ಕು ಶಾಲೆಗಳನ್ನು ಬೆಂಗಳೂರಿನ ಶಾಲೆಗಳ ಜೊತೆ ತುಲನೆ ಮಾಡಬೇಡಿ. ನಮ್ಮ ಶಾಲೆಯಲ್ಲಿ ಪ್ರಾಥಮಿಕ ಶಾಲಾ ಮಕ್ಕಳಿಗೆ 15-18 ಸಾವಿರ, ಪಿಯುಸಿ, ಪದವಿ ಮಕ್ಕಳಿಗೆ 20 ಸಾವಿರ ಫೀಸ್ ಇದೆ. ಮೂರು ಅಥವಾ ನಾಲ್ಕು ಕಂತಿನಲ್ಲಿ ಫೀಸ್ ತೆಗೆದುಕೊಳ್ಳುತ್ತೇವೆ. ಈ ಬಾರಿ ಕೊರೊನಾ ಎಲ್ಲರನ್ನು ಜರ್ಜರಿತ ಮಾಡಿದೆ. ಪೋಷಕರ ಕೈಯಲ್ಲಿ ಕಾಸಿಲ್ಲ, ಹಾಗಂತ ಮಕ್ಕಳಿಗೆ ಶಿಕ್ಷಣ ಕೊಡುವುದು ಅತ್ಯಾವಶ್ಯಕ ಎಂದು ಸುಕುಮಾರ್ ತಿಳಿಸಿದ್ದಾರೆ.
ಶಿಕ್ಷಕರಿಗೆ ಸಂಬಳ, ಬಸ್ ನಿರ್ವಹಣೆ, ಸಿಬ್ಬಂದಿ ಸಂಬಳ 45 ಲಕ್ಷದಷ್ಟು ಪ್ರತೀ ತಿಂಗಳಿಗೆ ಖರ್ಚು ಬರುತ್ತದೆ. ಬೈಂದೂರು ಗ್ರಾಮೀಣ ಭಾಗದ ಶಾಲೆ, ಇಲ್ಲಿನ ಮಕ್ಕಳನ್ನು ಪ್ರತಿಭಾವಂತರನ್ನು ಮಾಡುವ ಗುರಿ ಇಟ್ಟುಕೊಂಡಿದ್ದೇವೆ. ಎಲ್ಲಾ ಮಕ್ಕಳಿಗೆ ಶಿಕ್ಷಣ ಕೊಡಿಸುವ ಅಗತ್ಯತೆ ಇದೆ. ಆರ್ಥಿಕವಾಗಿ ಸಬಲರಾಗಿರುವವರು ಫೀಸ್ ವಿಚಾರದಲ್ಲಿ ಚೌಕಾಶಿ ಮಾಡಬಾರದು ಎಂದು ಶಾಸಕ ಸುಕುಮಾರ ಶೆಟ್ಟಿ ವಿನಂತಿ ಮಾಡಿದರು.