ಪೊಲೀಸರನ್ನು ನರಹತ್ಯೆಗೈದ ಡೆಡ್ಲಿ ರೌಡಿ ಶೀಟರ್ ವಿಕಾಸ್ ದುಬೆ ಯಾರು?

Public TV
2 Min Read
Vikas Dubey

– ಜೈಲಿನಲ್ಲಿದ್ದೇ ಪಂಚಾಯ್ತಿ ಚುನಾವಣೆ ಗೆದ್ದಿದ್ದ ರೌಡಿ

ಲಕ್ನೋ: ಉತ್ತರ ಪ್ರದೇಶದಲ್ಲಿ ನಡೆದ ಪೊಲೀಸರ ಹತ್ಯೆ ಇಂದು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಎಂಟು ಜನ ಪೊಲೀಸರನ್ನು ನಿರ್ದಾಕ್ಷಣ್ಯವಾಗಿ ಗುಂಡಿಕ್ಕಿ ಕೊಲ್ಲಲಾಗಿತ್ತು. ಓರ್ವ ರೌಡಿ ಶೀಟರ್ ಅನ್ನು ಅರೆಸ್ಟ್ ಮಾಡಲು ಹೋಗಿ ಎಂಟು ಮಂದಿ ಪೊಲೀಸರು ಜೀವ ಬಿಟ್ಟಿದ್ದರು.

ಹೌದು ಕೊಲೆ ಪ್ರಕರಣದ ಆರೋಪಿಯಾಗಿದ್ದ ಹಳೇ ರೌಡಿ ಶೀಟರ್ ವಿಕಾಸ್ ದುಬೆಯನ್ನು ಅರೆಸ್ಟ್ ಮಾಡಲು ಹೋದ ಪೊಲೀಸರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಓರ್ವ ಡಿವೈಎಸ್ಪಿ, ಮೂವರು ಸಬ್ ಇನ್ಸ್ ಪೆಕ್ಟರ್ ಗಳು ಹಾಗೂ ನಾಲ್ಕು ಮಂದಿ ಕಾನ್ಸ್ ಸ್ಟೇಬಲ್‍ಗಳು ಸೇರಿದಂತೆ ಒಟ್ಟು ಎಂಟು ಜನ ಪೊಲೀಸರನ್ನು ಕಾನ್ಪುರದ ಡಿಕ್ರು ಗ್ರಾಮದಲ್ಲಿ ಕ್ರಿಮಿನಲ್ ಗ್ಯಾಂಗ್ ಹತ್ಯೆ ಮಾಡಿತ್ತು.

ಈ ಎಲ್ಲದರ ಮಧ್ಯೆ ಈಗ ಸಾಮಾಜಿಕ ಜಾಲತಾಣದಲ್ಲಿ ವಿಕಾಸ್ ದುಬೆ ಯಾರು ಎಂಬ ಚರ್ಚೆ ನಡೆಯುತ್ತಿದೆ. ವಿಕಾಸ್ ದುಬೆ ಓರ್ವ ಉತ್ತರ ಪ್ರದೇಶದ ಹಳೇ ರೌಡಿಶೀಟರ್, ಈತನ ಮೇಲೆ 60 ಪ್ರಕರಣಗಳಿವೆ. ಜೊತೆಗೆ 2001ರಲ್ಲಿ ಬಿಜಿಪಿ ಪಕ್ಷದ ಸಚಿವರಾಗಿದ್ದ ಸಂತೋಷ್ ಶುಕ್ಲಾ ಅವರನ್ನು ಪೊಲೀಸ್ ಠಾಣೆಯಲ್ಲೇ ಗುಂಡಿಕ್ಕಿ ಕೊಂದು ಕೊಲೆಗಾರನಾಗಿ ಗುರುತಿಸಿಕೊಂಡಿದ್ದ. ನಂತರ ರಾಜಕೀಯವಾಗಿ ಸಬಲವಾಗಿ ಬೆಳೆದು ಇಂದು ಸಮಾಜ ದುಷ್ಟ ಶಕ್ತಿಯಾಗಿ ಪರಿವರ್ತನೆಗೊಂಡಿದ್ದಾನೆ.

Vikas Dubey 2

ಈತ 2000ರಲ್ಲಿ ಕಾನ್ಪುರದ ಶಿವ್ಲಿ ಪೊಲೀಸ್ ಠಾಣೆ ಪ್ರದೇಶದಲ್ಲಿರುವ ತಾರಚಂದ್ ಇಂಟರ್ ಕಾಲೇಜಿನಲ್ಲಿ ಸಹಾಯಕ ವ್ಯವಸ್ಥಾಪಕ ಸಿದ್ಧೇಶ್ವರ ಪಾಂಡೆ ಅವರನ್ನು ಹತ್ಯೆ ಮಾಡಿದ ಆರೋಪ ವಿಕಾಸ್ ದುಬೆ ಮೇಲೆ ಇತ್ತು. ಈ ಆರೋಪದ ಮೇಲೆ ಕಾನ್ಪುರದ ಜೈಲಿನಲ್ಲಿದ್ದ ವಿಕಾಸ್ ದುಬೆ ಅದೇ ವರ್ಷ ರಂಬಾಬು ಯಾದವ್ ಅವರ ಕೊಲೆ ಪ್ರಕರಣದಲ್ಲಿ ಸಂಚು ರೂಪಿಸಿ ಮತ್ತೆ ಅ ಪ್ರಕರಣದಲ್ಲೂ ಸಿಕ್ಕಿಬಿದ್ದಿದ್ದ.

Vikas Dubey 3

ಇದಾದ ನಂತರ 2004ರಲ್ಲಿ ಜೈಲಿನಿಂದ ಹೊರಬಂದ ವಿಕಾಸ್ ದುಬೆ, ಕೇಬಲ್ ಉದ್ಯಮಿ ದಿನೇಶ್ ದುಬೆ ಅವರ ಹತ್ಯೆಯಲ್ಲಿ ಭಾಗಿಯಾಗಿದ್ದ. ನಂತರ 2018ರಲ್ಲಿ ವಿಕಾಸ್ ದುಬೆ ತನ್ನ ಸೋದರಸಂಬಂಧಿ ಅನುರಾಗ್ ಮೇಲೆ ಮಾರಣಾಂತಿಕ ದಾಳಿ ನಡೆಸಿ ಜೈಲುಪಾಲಗಿದ್ದ. ನಂತರ ವಿಕಾಸ್ ಜೈಲಿನಲ್ಲಿದ್ದ, ಜೈಲಿನೊಳಗೆ ಇದ್ದುಕೊಂಡೇ ಅನುರಾಗ್ ನನ್ನು ಕೊಲೆ ಮಾಡಿಸಿದ್ದ. ಈ ವೇಳೆ ಅನುರಾಗ್ ಪತ್ನಿ ಈ ಪ್ರಕರಣದಲ್ಲಿ ವಿಕಾಸ್ ಮತ್ತು ಇತರ ನಾಲ್ವರ ವಿರುದ್ಧ ದೂರು ನೀಡಿದ್ದಳು.

police 1 e1585506284178

ಈ ನಡುವೆ 2002ರಲ್ಲೇ ವಿಕಾಸ್ ದುಬೆ ಅಕ್ರಮ ಕೆಲಸಗಳನ್ನು ಮಾಡಿ ಅದರಿಂದ ಬಂದ ಹಣದಲ್ಲಿ ಬೃಹತ್ ಭೂಮಿಯನ್ನು ಖರೀದಿಸಿದ್ದನು. ಇದೇ ಚಾಳಿಯನ್ನು ಮುಂದುವರೆಸಿ ಅಮಾಯಕರಿಂದ ಅಪಾರ ಪ್ರಮಾಣ ಆಸ್ತಿಯನ್ನು ಕಿತ್ತುಕೊಂಡು ದೊಡ್ಡ ಉದ್ಯಮಿಯಾಗಿ ಬೆಳೆದಿದ್ದ. ಜೊತೆಗೆ ಕಾನ್ಪುರ್ ನಗರದಲ್ಲಿ ಬಿಲ್ಹೌರ್, ಶಿವರಾಜ್ಪುರ್, ರಿನ್ಯಾನ್ ಮತ್ತು ಚೌಬೆಪುರ ಪ್ರದೇಶಗಳಲ್ಲಿ ಪ್ರಾಬಲ್ಯ ಸಾಧಿಸಿದ್ದನು. ಇದರ ಜೊತೆಗೆ ಜೈಲಿನಲ್ಲೇ ಇದ್ದುಕೊಂಡು ನಗರ ಪಂಚಾಯ್ತಿ ಚುನಾವಣೆಗೆ ನಿಂತು ಜಯ ಸಾಧಿಸಿ ರಾಜಕೀಯವಾಗಿಯೂ ಪ್ರಬಲ್ಯ ಹೊಂದಿದ್ದ ಎಂದು ಹೇಳಲಾಗಿದೆ.

ಕೆಲವು ದಿನಗಳ ಹಿಂದೆ ವಿಕಾಸ್ ದುಬೆ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು, ಕಾನ್ಪುರ ಪೊಲೀಸ್ ತಂಡ ವಿಕಾಸ್ ದುಬೆಯನ್ನು ಗುರುವಾರ ರಾತ್ರಿ ಬಂಧಿಸಲು ಹೋಗಿದೆ. ಬಿಕಾರು ಗ್ರಾಮಕ್ಕೆ ಪೊಲೀಸ್ ತಂಡ ತಲುಪಿದ ಕೂಡಲೇ, ಹಲವಾರು ಜೆಸಿಬಿ ವಾಹನಗಳನ್ನು ರಸ್ತೆಯಲ್ಲಿ ನಿಲ್ಲಿಸಿ ರಸ್ತೆಯನ್ನು ಬ್ಲಾಕ್ ಮಾಡಲಾಗಿದೆ. ಪೊಲೀಸ್ ತಂಡವನ್ನು ತಮ್ಮ ವಾಹನದಿಂದ ಕೆಳಗಿಳಿಯುವಂತೆ ಒತ್ತಾಯಿಸಲಾಗಿದೆ. ನಂತರ ಮನೆಯ ಮೇಲೆ ನಿಂತುಕೊಂಡು ಪೊಲೀಸರ ಮೇಲೆ ಗುಂಡಿನ ದಾಳಿ ಮಾಡಲಾಗಿದೆ ಎಂದು ಉತ್ತರ ಪ್ರದೇಶದ ಡಿಜಿಪಿ ಹೆಚ್‍ಸಿ ಅವಸ್ಥಿ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *