ಮಡಿಕೇರಿ: ಭವಿಷ್ಯದಲ್ಲಿ ಪೈಲೆಟ್ ಆಗಬೇಕೆಂಬ ಕನಸು ಹೊತ್ತಿದ್ದ ಕೊಡಗಿನ ಸುಂಟಿಕೊಪ್ಪ ಸಮೀಪದ ಮಾದಾಪುರದ ಜಂಬೂರುಬಾಣೆಯ ಯುವಕ ಗುಜರಾತಿನ ಅಹಮದಾಬಾದ್ ನಲ್ಲಿ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಬೋಪಯ್ಯ ಮತ್ತು ಮಾದಾಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಪೊನ್ನಮ್ಮ ಅವರ ಪುತ್ರ ಶಿಬಿ ಬೋಪಯ್ಯ(23) ಆತ್ಮಹತ್ಯೆಗೆ ಶರಣಾದ ಯುವಕ.
ಗುಜರಾತಿನ ಅಹಮದಾಬಾದ್ ನಲ್ಲಿ ಏರೋನಾಟಿಕ್ ಸೆಂಟರ್ ನ ತರಬೇತಿ ಕೇಂದ್ರದಲ್ಲಿ ಅಂತಿಮ ಪದವಿ ವ್ಯಾಸಂಗ ಮಾಡುತ್ತಿದ್ದ ಶಿಬಿ ಬೋಪಯ್ಯ, ಇನ್ನೇನು 3 ತಿಂಗಳಲ್ಲಿ ತರಬೇತಿ ಮುಗಿಸಿ ಭವಿಷ್ಯದ ಪೈಲಟ್ ಆಗುವ ಕನಸು ಹೊತ್ತಿದ್ದ. ಆದರೆ ಶುಕ್ರವಾರ ಸೆಂಟರ್ ಸಮೀಪದ ಕಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಮನೆಯವರು ಈಗಾಗಲೇ ಗುಜರಾತಿಗೆ ಪ್ರಯಾಣ ಬೆಳೆಸಿದ್ದು, ಅಲ್ಲಿ ತಲುಪಿದ ನಂತರವೇ ನಿಜಾಂಶ ಹೊರ ಬೀಳಲಿದೆ. ನೇಣು ಬಿಗಿದ ಸ್ಥಿತಿಯಲ್ಲಿರುವ ಯುವಕನ ಕಿವಿಯಲ್ಲಿ ಇಯರ್ ಫೋನ್, ಕೈಯ್ಯಲ್ಲಿ ವಾಚ್, ಶೂ ಧರಿಸಿರುವುದನ್ನು ಕಂಡು ಸಾರ್ವಜನಿಕರು ಸಂಶಯ ವ್ಯಕ್ತಪಡಿಸಿದ್ದಾರೆ.