ರಿಷಭ್ ಶೆಟ್ಟಿ ನಿರ್ಮಿಸಿ ನಟಿಸಿರುವ ‘ಹೀರೋ’ ಸಿನಿಮಾ ಕಳೆದ ಸಿನಿ ಶುಕ್ರವಾರ ಬಿಡುಗಡೆಯಾಗಿತ್ತು. ಇಂಟರ್ ಸ್ಟಿಂಗ್ ಕಥಾಹಂದರ, ಚಿತ್ರಕಥೆ ಪ್ರೇಕ್ಷಕರಿಗೆ ಮನರಂಜನೆ ನೀಡುವಲ್ಲಿ ಯಶಸ್ವಿಯಾಗಿತ್ತು. ಬಿಡುಗಡೆಯಾದ ಎಲ್ಲಾ ಕಡೆಗಳಲ್ಲೂ ಪ್ರೇಕ್ಷಕರ ಮನಗೆದ್ದು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು ಹೀರೋ ಸಿನಿಮಾ. ಇದೀಗ ಪ್ರೇಕ್ಷಕರ ಮನಗೆದ್ದ ಈ ಸಿನಿಮಾ ಪೈರಸಿ ಹಾವಳಿಗೆ ಸಿಲುಕಿದ್ದು ಚಿತ್ರತಂಡದ ಬೇಸರ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.
ಹೌದು, ಕೋವಿಡ್-19ರಿಂದ ಈಗ ಚಿತ್ರರಂಗ ಸುಧಾರಿಸಿಕೊಂಡು ಒಂದೊಂದೇ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಒಂದು ವರ್ಷದ ನಂತರ ಪ್ರೇಕ್ಷಕರು ಚಿತ್ರಮಂದಿರದಲ್ಲಿ ಸಿನಿಮಾ ನೋಡಿ ಎಂಜಾಯ್ ಮಾಡುತ್ತಿರಬೇಕಾದ್ರೆ ಪೈರಸಿ ಹಾವಳಿ ಮತ್ತೆ ಚಿತ್ರರಂಗಕ್ಕೆ ಮುಳುವಾಗಿದೆ. ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದ ಹೀರೋ ಸಿನಿಮಾ ಬಿಡುಗಡೆಯಾದ ಮೂರೇ ದಿನಕ್ಕೆ ಪೈರಸಿ ಬಲೆಗೆ ಸಿಲುಕಿದ್ದು ಚಿತ್ರತಂಡದ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಚಿತ್ರತಂಡ ದೂರನ್ನು ದಾಖಲಿಸಿದ್ದು ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.
`ಹೀರೋ’ ಸಿನಿಮಾ ಪೈರಸಿ ಬಗ್ಗೆ ಚಿತ್ರದ ನಾಯಕ ಹಾಗೂ ನಿರ್ಮಾಪಕ ರಿಷಬ್ ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ನೋವನ್ನು ಹೊರಹಾಕಿದ್ದಾರೆ. ಕೋವಿಡ್ ಲಾಕ್‍ಡೌನ್ ಸಂದರ್ಭದಲ್ಲೂ ಕೂಡ ಜನರಿಗೆ ಮನರಂಜನೆ ನೀಡುವ ಉದ್ದೇಶದಿಂದ ಸಿನಿಮಾ ಮಾಡಿದ್ವಿ, ಸಿನಿಮಾ ಬಿಡುಗಡೆಯಾಗಿ ಒಳ್ಳೆಯ ರೆಸ್ಪಾನ್ಸ್ ಕೂಡ ಪಡೆದುಕೊಂಡಿತ್ತು. ಆದರೆ ಇಂತಹ ಸಮಯದಲ್ಲಿ ಪೈರಸಿ ಎದುರಾಗಿದೆ. ಆ್ಯಂಟಿ ಪೈರಸಿ ತಂಡದ ಜೊತೆ ಕುಳಿತು ವೆಬ್‍ಸೈಟ್ ಗಳಿಂದ ಎಷ್ಟೇ ಪೈರಸಿ ಲಿಂಕ್ ಡಿಲೀಟ್ ಮಾಡಿಸುತ್ತಿದ್ರೂ ಕೂಡ ಪೂರ್ತಿಯಾಗಿ ಲಿಂಕ್ಗಳನ್ನು ಡಿಲೀಟ್ ಮಾಡಲು ಸಾಧ್ಯವಾಗುತ್ತಿಲ್ಲ. ಪೈರಸಿ ವಿಚಾರದಲ್ಲಿ ಚಿತ್ರಮಂದಿರಗಳ ಮಾಲೀಕರ ಬಗ್ಗೆಯೂ ರಿಷಬ್ ಶೆಟ್ಟಿ ಅಸಮಾಧಾನ ಹೊರಹಾಕಿದ್ದು, ಚಿತ್ರಮಂದಿರಗಳಲ್ಲಿ ಕ್ಯಾಮೆರಾ, ಮೊಬೈಲ್ ತೆಗೆದುಕೊಂಡು ರೆಕಾರ್ಡ್ ಮಾಡೋದಕ್ಕೆ ಹೇಗೆ ಅನುವು ಮಾಡಿಕೊಡುತ್ತಾರೆ ಎಂದಿದ್ದಾರೆ. ಇದೇ ವೇಳೆ ಪೈರಸಿ ವೆಬ್ಸೈಟ್ಗಳ ನಿಷೇಧ ಯಾಕೆ ಆಗ್ತಿಲ್ಲ ಎಂಬುದರ ಬಗ್ಗೆಯೂ ಪ್ರಶ್ನಿಸಿದ್ದಾರೆ ರಿಷಬ್.
ಒಟ್ನಲ್ಲಿ ಕೋವಿಡ್ 19ರಿಂದ ಚೇತರಿಸಿಕೊಳ್ಳುತ್ತಿದ್ದ ಚಿತ್ರರಂಗಕ್ಕೆ ಪೈರಸಿ ಹಾವಳಿ ಶುರುವಾಗಿದೆ. ಇದನ್ನು ಬೇರು ಸಮೇತ ಕಿತ್ತು ಹಾಕದೆ ಚಿತ್ರರಂಗಕ್ಕೆ ಉಳಿಗಾಲವಿಲ್ಲ. ಈ ನಿಟ್ಟಿನಲ್ಲಿ ಚಿತ್ರರಂಗ ಹಾಗೂ ಚಿತ್ರತಂಡ ಯಾವ ರೀತಿ ಹೆಜ್ಜೆ ಇಡುತ್ತದೆ ಎನ್ನೋದನ್ನ ಕಾದು ನೋಡಬೇಕು.
Corona ಸಮಯದಲ್ಲಿ ಸಿನೆಮಾ ಮೇಲಿನ ಪ್ರೀತಿಗಾಗಿ ಕೇವಲ 24 ಜನ ಸಿನಿಮಾ ಮಾಡಿಯಾಗಿದೆ .. ಚಿತ್ರಮಂದಿರಕ್ಕೆ ಬಿಟ್ಟಾಗಿದೆ.. ಇಂದಿಗೆ Piracy ಆಗಿದೆ.. ಇನ್ನು ನಮ್ದೇನಿದೆ. #StopPiracy #HeroTheFilm pic.twitter.com/MnD8HC1Ga7
— Rishab Shetty (@shetty_rishab) March 7, 2021