ಪುರಾಣ ಪ್ರಸಿದ್ಧ ಕೋಟಿತೀರ್ಥ ಗಂಗೆ ಶುದ್ಧಿಗೆ ಶೀಘ್ರದಲ್ಲೇ ಅನುದಾನ

Public TV
2 Min Read
koti thirtha web

ಕಾರವಾರ: ಪುರಾಣ ಪ್ರಸಿದ್ಧ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಕೋಟಿ ತೀರ್ಥ ಕೆರೆಯ ಶುದ್ಧಿಗೆ ರಾಜ್ಯ ಸರ್ಕಾರದಿಂದ ಅಗತ್ಯ ಹಣ ನೀಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಹೇಳಿದ್ದಾರೆ.

koti thirtha web 2

ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಗೋಕರ್ಣಕ್ಕೆ ಆಗಮಿಸಿದ್ದ ಸಚಿವ ಈಶ್ವರಪ್ಪನವರು ಕೋಟಿ ತೀರ್ಥಕ್ಕೆ ಭೇಟಿ ನೀಡಿ ಅಲ್ಲಿನ ಸಮಸ್ಯೆಯನ್ನು ಆಲಿಸಿದ್ದರು. ಈ ವೇಳೆ ಪುಣ್ಯ ಕ್ಷೇತ್ರದ ಗಂಗೆ ಮಲೀನವಾಗಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದ ಅವರು ಕೋಟಿ ತೀರ್ಥ ಅಭಿವೃದ್ಧಿ ಮಾಡುವ ಭರವಸೆ ನೀಡಿದ್ದರು.

ಕೋಟಿತೀರ್ಥ ಅಭಿವೃದ್ಧಿಗೆ ಸೂಚನೆ: ಗೋಕರ್ಣದ ಕೋಟಿತೀರ್ಥ ಅಭಿವೃದ್ಧಿಗೆ 1.50 ಕೋಟಿ ಅಗತ್ಯವಿದೆ ಎಂದು ಅಧಿಕಾರಿಗಳು ಶನಿವಾರ ನಡೆದ ಸಭೆಯಲ್ಲಿ ಸಚಿವರಿಗೆ ಮಾಹಿತಿ ನೀಡಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಈಶ್ವರಪ್ಪ, ಜಿಲ್ಲಾ ಪಂಚಾಯಿತಿಯಲ್ಲಿ ಅನುದಾನದ ಲಭ್ಯತೆಯ ಬಗ್ಗೆ ಪರಿಶೀಲಿಸಿ, ಒಂದು ವೇಳೆ ಕೊರತೆಯಿದ್ದರೆ ತಿಳಿಸಿ, ಅನುದಾನ ಬಿಡುಗಡೆ ಮಾಡಿಸಲಾಗುವುದು. ಕೂಡಲೇ ಕಾಮಗಾರಿ ಆರಂಭವಾಗಬೇಕು ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಲಾಗಿದೆ. ಶೀಘ್ರ ಸ್ವಚ್ಛತೆ ಮಾಡಲು ಸೂಚಿಸಲಾಗಿದೆ ಎಂದು ಪಬ್ಲಿಕ್ ಟಿ.ವಿ ಗೆ ಮಾಹಿತಿ ನೀಡಿದ್ದಾರೆ.

koti thirtha web 1

ವೈಜ್ಞಾನಿಕ ಪದ್ಧತಿ ಅನುಸರಿಸಿ: ಕೋಟಿ ತೀರ್ಥ ಸ್ಥಳವು ಗೋಕರ್ಣದ ಮಧ್ಯ ಭಾಗದಲ್ಲಿದೆ. ಅಂತರಗಂಗೆಯಾಗಿ ಕೋಟಿ ತೀರ್ಥದಲ್ಲಿ ಪ್ರತ್ಯಕ್ಷವಾಗುವ ಪುಷ್ಕರಣಿಯ ನೀರು ಗಂಗಾ ಜಲದಷ್ಟೇ ಪವಿತ್ರವೆಂದು ಪುರಾಣದಲ್ಲಿ ವಿಶ್ಲೇಷಣೆಗಳಿವೆ. ಇದಲ್ಲದೇ ಈ ಪುಷ್ಕರಣಿ ನೀರಿನ ಆಗರವು ಸುತ್ತಮುತ್ತಲ ಪ್ರದೇಶದ ಜಲಮೂಲ ಸಹ ಆಗಿದೆ. ಹೀಗಾಗಿ ಇದರಲ್ಲಿರುವ ಹುಳು ತೆಗೆಯಲು ಹಾಗೂ ಶುದ್ಧತೆ ಮಾಡಲು ವೈಜ್ಞಾನಿಕ ಪದ್ದತಿ ಅನುಸರಿಸಬೇಕು ಎಂಬ ಸ್ಥಳೀಯರು ಒತ್ತಾಯಿಸಿದ್ದರು. ಈ ಕುರಿತು ಜಿಲ್ಲಾಡಳಿತ ಕೂಡ ಗಮನ ಹರಿಸುತಿದ್ದು, ಇದರ ಅಂದ ಕೆಡದೇ ಜಲಮೂಲ ಬತ್ತದಂತೆ ನೋಡಿಕೊಂಡು ಶುದ್ಧೀಕರಣಕ್ಕೆ ಜಿಲ್ಲಾಡಳಿತ ಪ್ರಯತ್ನ ನಡೆಸಿದೆ.

koti thirtha web 3

ಕೋಟಿ ತೀರ್ಥವನ್ನು ಕಳೆದ ಆರು ವರ್ಷದ ಹಿಂದೆ ಸ್ವಚ್ಛತೆ ಮಾಡಲಾಗಿತ್ತು. ಹೊಂಡದ ಹೂಳೆತ್ತಿ ಒಂದು ಹಂತದ ಸ್ವಚ್ಛತೆ ಮಾಡಲಾಗಿತ್ತು. ಆದರೆ ಆ ಸಂದರ್ಭದಲ್ಲಿ ಅವೈಜ್ಞಾನಿಕ ಪದ್ದತಿ ಅನುಸರಿಸಿದರಿಂದ ಹೊಂಡ ಈ ರೀತಿ ಗಲೀಜಾಗಿದೆ ಎಂದು ಸ್ಥಳೀಯರು ದೂರಿದ್ದರು.

koti thirtha web 5

ಮಲೀನದಿಂದ ಕೋಟಿ ತೀರ್ಥದ ನೀರು ಹಸಿರು ಬಣ್ಣಕ್ಕೆ ತಿರುಗಿದೆ. ಕಸ ಕಡ್ಡಿಗಳು, ಅವ್ಯಾಹತವಾಗಿ ಬೆಳೆದುಕೊಂಡು ಪಾಚಿ, ಕೊಳೆತು ನಾರುತ್ತಿರುವ ಹೂವುಗಳಿಂದ ಕೋಟಿ ತೀರ್ಥದ ಅಂದ ಕೆಟ್ಟು ಸ್ವಚ್ಚತೆ ಇಲ್ಲದೆ ಪ್ರಾಮುಖ್ಯತೆ ಕಳೆದುಕೊಂಡಿತ್ತು. ಇದರಲ್ಲಿ ಸ್ನಾನ ಮಾಡುವವರಿಗೆ ದೇಹದಲ್ಲಿ ತುರುಕೆ, ಚರ್ಮ ರೋಗಗಳು ಬಾಧಿಸುತಿತ್ತು. ಈ ಕಾರಣ ಭಕ್ತರು ಪಿಂಡ ಪ್ರಧಾನ ಮಾಡುವ ಸಮಯದಲ್ಲಿ ನೀರನ್ನು ಪ್ರೋಕ್ಷಣ್ಯ ಮಾತ್ರ ಮಾಡಿಕೊಳ್ಳುತಿದ್ದರು. ಹಿಂದೂ ಸಂಪ್ರದಾಯದ ವಿಧಿ ವಿಧಾನಗಳನ್ನು ಆಚರಿಸುವ ಪವಿತ್ರ ಪುಷ್ಕರಣಿ ಹೊಂಡ ಸದ್ಯ ತನ್ನ ಅಂದವನ್ನು ಕಳೆದುಕೊಂಡು ರೋಗ ಹರಡುವ ಮೂಲವಾಗಿದೆ.

koti thirtha web 4

ಗೋಕರ್ಣ ದಲ್ಲಿ ಪ್ರತಿ ವರ್ಷ ಶಿವರಾತ್ರಿ ಸಂದರ್ಭದಲ್ಲಿ ಇಲ್ಲಿನ ಗ್ರಾಮ ಪಂಚಾಯತಿಯಿಂದ ಸ್ವಚ್ಛತೆ ಕಾರ್ಯ ಮಾಡಲಾಗುತ್ತದೆ. ಆದರೆ ಇದು ಕೇವಲ ತಾತ್ಕಾಲಿಕ. ಪೂರ್ಣ ಪ್ರಮಾಣದ ಸ್ವಚ್ಛತೆ ಆಗುತ್ತಿಲ್ಲ. ಇದರಿಂದಾಗಿ ಇಲ್ಲಿನ ನೀರಿನಲ್ಲಿ ಸ್ನಾನ ಮಾಡಲು ಸಹ ಭಕ್ತರು ಹೆದರುತಿದ್ದರು. ಸದ್ಯ ಹಣ ಬಿಡುಗಡೆಗೆ ಎಲ್ಲಾ ಸಿದ್ಧತೆಗಳು ನಡೆದಿದ್ದು ಶೀಘ್ರದಲ್ಲಿ ಪವಿತ್ರ ಗಂಗೆ ಶುದ್ಧವಾಗಲಿದ್ದಾಳೆ.

Share This Article
Leave a Comment

Leave a Reply

Your email address will not be published. Required fields are marked *