ಮಂಡ್ಯ: ನಾನು ಎರಡು ಬಾರಿ ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕನಾಗಿದ್ದೆ. ನಮ್ಮ ಕಾಲದಲ್ಲೂ ಕೆಆರ್‌ಎಸ್ ಅಣೆಕಟ್ಟೆ ಬಗ್ಗೆ ಸಣ್ಣಪುಟ್ಟ ವ್ಯತ್ಯಾಸಗಳು ಇದ್ದವು ಆಗ ಪುಣೆಯಿಂದ ಬಂದಿದ್ದಂತಹ ಟೆಕ್ನಿಕಲ್ ಟೀಂ ಕೆಆರ್‌ಎಸ್ ಬಳಿ ಗಣಿಗಾರಿಕೆ ಬಂದ್ ಮಾಡಿಸುವಂತೆ ಸೂಚನೆ ನೀಡಿತ್ತು ಎಂದು ಶ್ರೀರಂಗಪಟ್ಟಣ ಕ್ಷೇತ್ರದ ಮಾಜಿ ಶಾಸಕ ರಮೇಶ್‍ಬಾಬು ಬಂಡಿಸಿದ್ದೇಗೌಡ ಹೇಳಿದ್ದಾರೆ.
ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಮೇಶ್‍ಬಾಬು ಬಂಡಿಸಿದ್ದೇಗೌಡರು, ನಾನು ಶಾಸಕನಾಗಿದ್ದಾಗ ಟೆಕ್ನಿಕಲ್ ಟೀಂ ಮಾಡಿ ಅದನ್ನು ಸರ್ವೆ ಮಾಡಿಸಲಾಗಿತ್ತು. ಪುಣೆಯಿಂದ ಬಂದಿದ್ದಂತಹ ಟೆಕ್ನಿಕಲ್ ಟೀಂ 20 ಕಿಲೋಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆ ಬಂದ್ ಮಾಡಿಸಬೇಕು ಎಂದು ಸೂಚಿಸಿತ್ತು. ಅಂದಿನ ಜಿಲ್ಲಾಧಿಕಾರಿಗಳು ಅದರ ಬಗ್ಗೆ ಕ್ರಮ ತೆಗೆದುಕೊಂಡಿದ್ದರು. ನಂತರ ಸರ್ಕಾರ ಬದಲಾವಣೆ ಆಗಿದೆ. ಅದರ ನಿಲುವು ಬದಲಾವಣೆ ಆಗಿದೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಕೆಆರ್‌ಎಸ್ ಬಿರುಕು ಬಿಟ್ಟಿರುವುದು ಸತ್ಯ: ಸುಮಲತಾ
ಈಗ ಮತ್ತೆ ಕೆಆರ್‌ಎಸ್ ಎದುರಾಗುವ ಸಮಸ್ಯೆ ಬಗ್ಗೆ ಚರ್ಚೆ ಆರಂಭವಾಗಿದೆ. ಸರ್ಕಾರ ಒಂದು ಟೆಕ್ನಿಕಲ್ ಟೀಂ ಮಾಡಲಿ. ವರದಿ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳಲಿ. ಇದು ಬಿಟ್ಟು ಅನವಶ್ಯಕವಾಗಿ ರಸ್ತೆಯಲ್ಲಿ ನಿಲ್ಲುವುದರಿಂದ ಜನಸಾಮಾನ್ಯರು ನಮ್ಮ ಮೇಲೆ ಇಟ್ಟ ಗೌರವ ಕಡಿಮೆ ಆಗುತ್ತೆ. ಸಣ್ಣಪುಟ್ಟ ಸಮಸ್ಯೆ ಬಿಟ್ಟರೆ ಕೆಆರ್‍ಎಸ್‍ನಲ್ಲಿ ಬೇರೆ ಸಮಸ್ಯೆಗಳಿಲ್ಲ. ಮುಂದೆ ಇದೇ ಸಣ್ಣಪುಟ್ಟ ಸಮಸ್ಯೆ ದೊಡ್ಡದಾಗಬಾರದು ಎಂದು ರಮೇಶ್‍ಬಾಬು ಬಂಡಿಸಿದ್ದೇಗೌಡ ತಿಳಿಹೇಳಿದರು.