ಮಡಿಕೇರಿ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದೆ. ಅಲ್ಲದೇ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆಯಿಂದ ಪಾಸಿಟಿವ್ ಬಂದ ರೋಗಿಗಳು ಜಿಲ್ಲಾಡಳಿತ ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಮಡಿಕೇರಿ ಕ್ಷೇತ್ರದ ಶಾಸಕರಾದ ಅಪ್ಪಚ್ಚು ರಂಜನ್ ಇಂದು ಸೋಮವಾರಪೇಟೆ ಮತ್ತು ಮಡಿಕೇರಿ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ ಕೊರೊನ ಸೋಂಕಿತರರನ್ನು ಉಪಚರಿಸಿ ಆಸ್ಪತ್ರೆಯಲ್ಲಿ ಅಗುತ್ತಿರುವ ಸಮಸ್ಯೆಗಳನ್ನು ಪರಿಶೀಲನೆ ಮಾಡಿದರು.
ಆಸ್ಪತ್ರೆಯಲ್ಲಿ ಇರುವ ಕೋವಿಡ್ ವಾರ್ ಅಲ್ಲದೆ ಇತರೆ ವಾರ್ಡ್ ಗಳನ್ನು ಪರಿಶೀಲಿಸಿ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅಪ್ಪಚ್ಚು ರಂಜನ್, ಕೊರೊನ ಸೋಂಕಿತರು ಆಸ್ಪತ್ರೆಯಲ್ಲಿ ದೊರಕುತ್ತಿರುವ ಚಿಕಿತ್ಸೆ ಮತ್ತು ಸೌಲಭ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಅರೋಗ್ಯ ಇಲಾಖೆಯ ಸಿಬ್ಬಂದಿ ಹಗಲು ರಾತ್ರಿ ಎನ್ನದೆ ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಉತ್ತಮ ರೀತಿಯಲ್ಲಿ ಚಿಕಿತ್ಸೆಗಳನ್ನು ನೀಡುತ್ತಿದ್ದು ಜನರು ಇಲ್ಲಿಯ ಪ್ರಯೋಜನ ಪಡೆಯುತ್ತಿದ್ದಾರೆ ಎಂದರು.
ಸದ್ಯಕ್ಕೆ 250 ಹಾಸಿಗೆಗಳು ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿದೆ. ಬೇರೆ ಕಡೆ ಹೋಲಿಸಿದರೆ ಕೊಡಗಿನ ಕೋವಿಡ್ ಆಸ್ಪತ್ರೆಯಲ್ಲಿ ಉತ್ತಮವಾದ ಚಿಕಿತ್ಸೆ ದೊರಕುತ್ತಿದೆ. ಕೆಲವೊಂದು ಸಣ್ಣಪುಟ್ಟ ಲೋಪಗಳನ್ನೇ ದೊಡ್ಡದು ಮಾಡಿ ಹೇಳುವುದು ಸರಿಯಲ್ಲ. ಅಪಪ್ರಚಾರಗಳಿಗೆ ಕಿವಿಕೊಡದೆ ರೋಗ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಆಸ್ಪತ್ರೆಗೆ ಬನ್ನಿ. ದಯವಿಟ್ಟು ಕೊಡಗಿನ ಜನತೆ ಮಾಸ್ಕ್ ಧರಿಸಿಕೊಳ್ಳಿ. ಸಾಮಾಜಿಕ ಅಂತರ ಕಾಪಾಡಿಕೊಳ್ಳಿ. ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಬನ್ನಿ. ಕೊರೊನ ನಿರ್ಮೂಲನೆ ಮಾಡಿ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಸಹಕರಿಸಿ ಎಂದು ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮೋಹನ್, ಡಾ.ಲೋಕೇಶ್, ಡಾ.ರೂಪೇಶ್, ಗೋಪಾಲ್, ಮತ್ತು ಆರೋಗ್ಯ ಸಿಬ್ಬಂದಿಗಳು ಉಪಸ್ಥಿತರಿದ್ದರು.