ಮಂಗಳೂರು: ಇದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ವಿಧಾನ ಪರಿಷತ್ ಇತಿಹಾಸ ಪರಂಪರೆಗೆ ಕಳಂಕ ತಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ವಿಧಾನ ಪರಿಷತ್ ನಲ್ಲಿ ತಳ್ಳಾಟ ನೂಕಾಟ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಕಾಂಗ್ರೆಸ್ ವಿಧಾನ ಸಭೆ, ವಿಧಾನ ಪರಿಷತ್ ನ ಹೊರಗೆ ಗೂಂಡಾಗಿರಿ ಮಾಡುತ್ತಿತ್ತು. ಈಗ ಒಳಗೂ ಗುಂಡಾಗಿರಿ ಮಾಡುತ್ತಿದೆ. ಈ ಮೂಲಕ ರಾಜ್ಯದ ಜನತೆಗೆ ಅವಮಾನ ಮಾಡಿದಂತಾಗಿದೆ ಎಂದು ಕಿಡಿಕಾರಿದರು.
ಇದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ವಿಧಾನ ಪರಿಷತ್ ಇತಿಹಾಸ ಪರಂಪರೆಗೆ ಕಳಂಕ ತಂದಿದೆ. ಈ ಬಗ್ಗೆ ಕಾಂಗ್ರೆಸ್ ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕು. ಕಾಂಗ್ರೆಸ್ ರಾಜ್ಯಾಧ್ಯಕ್ಷ, ಮುಖ್ಯಮಂತ್ರಿಯಾಗಿದ್ದವರು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ವಿಧಾನ ಪರಿಷತ್ ಕಲಾಪ ಇಂದು ಭಾರೀ ಹೈ ಡ್ರಾಮಾಗೆ ಸಾಕ್ಷಿಯಾಗಿತ್ತು. ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು ಪರಸ್ಪರ ಎಳೆದಾಡುವ ಮೂಲಕ ದುರ್ವರ್ತನೆ ತೋರಿದ್ದಾರೆ. ಅಲ್ಲದೆ ಕಾಂಗ್ರೆಸ್ ಸದಸ್ಯರು ಸಭಾಂಗಣದ ಬಾಗಿಲು ಒದ್ದು, ಸಭಾಪತಿ ಮುಂದಿನ ಗಾಜನ್ನು ಕಿತ್ತು ಹಾಕಿದ್ದಾರೆ.
ಪರಿಷತ್ ಅಧಿವೇಶನ ಆರಂಭವಾಗುವ ಕುರಿತು ಬೆಲ್ ಆಗುತ್ತಿದ್ದಂತೆ ಉಪ ಸಭಾಪತಿ ಧರ್ಮೇಗೌಡ ಅವರು ಬಂದು ಕುಳಿತರು. ಇದಕ್ಕೆ ಕಾಂಗ್ರೆಸ್ ಸದ್ಯಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ. ಬಳಿಕ ಪೀಠದ ಮುಂದೆ ಎರಡು ಪಕ್ಷದ ನಾಯಕರ ಗೊಂದಲ ಸೃಷ್ಟಿಸಿದ್ದು, ಪರಸ್ಪರ ಎಳೆದಾಡಿಕೊಂಡಿದ್ದಾರೆ. ಈ ಮೂಲಕ ನಾಚಿಕೆಯಾಗುವಂತೆ ವರ್ತಿಸಿದ್ದಾರೆ. ತಳ್ಳಾಟ ನೂಕಾಟದ ಮಧ್ಯೆ ಬಿಜೆಪಿ ಸದಸ್ಯರು ಉಪ ಸಭಾಪತಿಗೆ ರಕ್ಷಣೆ ನೀಡಿದ್ದಾರೆ.
ಪೀಠದ ಮುಂದೆ ಎರಡೂ ಪಕ್ಷಗಳ ಸದಸ್ಯರು ಹೈ ಡ್ರಾಮಾ ಮಾಡಿದ್ದು, ಬಿಜೆಪಿ ಸದಸ್ಯರು ಸಭಾಪತಿ ಬರದಂತೆ ಸಭಾಂಗಣ ಬಾಗಿಲನ್ನು ಮುಚ್ಚಿದ್ದಾರೆ. ಈ ವೇಳೆ ಕಾಂಗ್ರೆಸ್ ನಜೀರ್ ಅಹಮದ್ ಬಾಗಿಲನ್ನು ಕಾಲಿನಲ್ಲಿ ಒದ್ದಿದ್ದಾರೆ. ಬಳಿಕ ಬಾಗಿಲು ತೆರೆಯಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ಇದಕ್ಕೆ ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ.