ಪಬ್ಲಿಕ್ ಟಿವಿ ವರದಿಗೆ ಸ್ಪಂದನೆ – ಸಂತ್ರಸ್ತರಿಗೆ ದಾನಿಗಳಿಂದ ಆಹಾರ ಕಿಟ್ ವಿತರಣೆ

Public TV
1 Min Read
rcr imapct 2

ರಾಯಚೂರು: ಜಿಲ್ಲೆಯಲ್ಲಿ ಸುರಿದ ಅತಿಯಾದ ಮಳೆಗೆ ರಾಯಚೂರು ತಾಲೂಕಿನ ಇಡಪನೂರು ಗ್ರಾಮದ ಜನ ಅಕ್ಷರಶಃ ಬೀದಿಗೆ ಬಂದಿದ್ದರು. ಇಲ್ಲಿನ ಜನರ ಪರಸ್ಥಿತಿ ಬಗ್ಗೆ ಪಬ್ಲಿಕ್ ಟಿವಿ ವರದಿಯನ್ನು ಪ್ರಸಾರ ಮಾಡಿತ್ತು. ವರದಿಗೆ ಸ್ಪಂದಿಸಿದ ದಾನಿಗಳು ಸಂತ್ರಸ್ತರಿಗೆ ಆಹಾರ ಕಿಟ್ ಹಾಗೂ ಮಾಸ್ಕ್ ವಿತರಣೆ ಮಾಡಿದ್ದಾರೆ.

ಅತೀವೃಷ್ಟಿಯಿಂದ ರಾಯಚೂರು ಜಿಲ್ಲೆ ಈಗ ತತ್ತರಿಸಿ ಹೋಗಿದೆ. ಕಳೆದ ತಿಂಗಳು ಸುರಿದ ಭಾರೀ ಮಳೆಗೆ ರಾಯಚೂರು ತಾಲೂಕಿನ ಬಹುತೇಕ ಹಳ್ಳಿಗಳು ಅಲ್ಲೋಲ ಕಲ್ಲೋಲವಾಗಿವೆ. ನೂರಾರು ಮನೆಗಳು ಬಿದ್ದಿವೆ, ಸಾವಿರಾರು ಎಕ್ರೆ ಜಮೀನು ಹಾಳಾಗಿದೆ. ರೈತರ ಬದುಕು ಬೀದಿಗೆ ಬಂದಿದೆ. ಇಲ್ಲಿನ ಇಡಪನೂರು ಗ್ರಾಮದ ಪರಸ್ಥಿತಿಯಂತೂ ಹೇಳತೀರದು. ಗ್ರಾಮದಲ್ಲಿ 56 ಮನೆಗಳು ಸಂಪೂರ್ಣ ಕುಸಿದು ಬಿದ್ದಿದ್ದು 100ಕ್ಕೂ ಹೆಚ್ಚು ಮನೆಗಳು ಭಾಗಶಃ ಕುಸಿದಿವೆ. ಹೀಗಾಗಿ ಜನ ಸೂರಿಲ್ಲದೆ ಸಂತ್ರಸ್ತರಾಗಿದ್ದಾರೆ.

rcr imapct

ಜಿಲ್ಲಾಡಳಿತ ಒಂದೆರಡು ಬಾರಿ ದಿನಸಿ ಪದಾರ್ಥ ನೀಡಿ ಕೈ ತೊಳೆದುಕೊಂಡಿತ್ತು. ಗ್ರಾಮದ ಶಾಲೆ, ಸಮುದಾಯ ಭವನದಲ್ಲಿ ಸಂತ್ರಸ್ತರು ಒಂದು ತಿಂಗಳಿಂದ ಆಶ್ರಯ ಪಡೆದಿದ್ದಾರೆ. ಆದರೆ ಊಟಕ್ಕೆ ಕಷ್ಟಪಡುತ್ತಿದ್ದರು. ಈ ಕುರಿತು ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿತ್ತು. ವರದಿಗೆ ಸ್ಪಂದಿಸಿ ದಾನಿಗಳು ಸಂತ್ರಸ್ತರಿಗೆ ಆಹಾರ ಕಿಟ್ ವಿತರಣೆ ಮಾಡಿದ್ದಾರೆ. ರಾಯಚೂರು ರೋಟರಿ ಕ್ಲಬ್ ಹಾಗೂ ಸಾವಿತ್ರಿ ಗ್ರೂಪ್ ರಾಯಚೂರು ಸಹಯೋಗದಲ್ಲಿ ಆಹಾರ ಕಿಟ್ ವಿತರಿಸಲಾಯಿತು.

rcr imapct 3

ಪಬ್ಲಿಕ್ ಟಿವಿ ವರದಿ ಬಳಿಕ ಜಿಲ್ಲಾಡಳಿತ ಸಹ ಎಚ್ಚೆತ್ತು ಸಂತ್ರಸ್ತರು ಶೆಡ್ ನಿರ್ಮಿಸಿಕೊಳ್ಳಲು ಟಿನ್ ಹಾಗೂ ಪೊಲೀಸ್ ವಿತರಣೆ ಮಾಡಿದ್ದಾರೆ. ಆದರೆ ಸಂಪೂರ್ಣ ಮನೆಗಳು ಬಿದ್ದು ಮನೆಯಲ್ಲಿನ ದವಸ ಧಾನ್ಯವನ್ನೂ ಕಳೆದುಕೊಂಡ ಜನ ಊಟಕ್ಕೆ ಪರದಾಡುವ ಸ್ಥಿತಿಯಿದೆ. ಪ್ರತಿದಿನ ಕೂಲಿ ಕೆಲಸ ಮಾಡಿಕೊಂಡು ಊಟ ಮಾಡುತ್ತಿದ್ದಾರೆ. ಶಾಲೆ ಸಮುದಾಯ ಭವನದಲ್ಲೇ ವಾಸವಾಗಿದ್ದಾರೆ. ಆದರೆ ಈಗ ಮತ್ತೆ ಮಳೆ ಬಂದಿದ್ದರಿಂದ ಕೂಲಿ ಕೆಲಸವೂ ಇಲ್ಲದೆ ಒಂದೊತ್ತಿನ ಊಟಕ್ಕೆ ಕಷ್ಟಪಡುತ್ತಿದ್ದರು. ಸಂತ್ರಸ್ತರ ಸಂಕಷ್ಟದ ಬಗ್ಗೆ ಪಬ್ಲಿಕ್ ಟಿವಿ ಪ್ರಸಾರ ಮಾಡಿದ ವರದಿಗೆ ಸ್ಪಂದನೆ ಸಿಕ್ಕಿದ್ದರಿಂದ ನಿರಾಶ್ರಿತರಿಗೆ ಆಹಾರದ ಕಿಟ್ ಸಿಕ್ಕಿದ್ದು ಸಂತಸ ವ್ಯಕ್ತಪಡಿಸಿದ್ದಾರೆ.

Share This Article