ಬೆಂಗಳೂರು: ಜಾತಿ ಸಮೀಕ್ಷೆ ಬಿಡುಗಡೆಗೆ ಎಚ್‍ಡಿಕೆ ಅಡ್ಡಗಾಲು ಹಾಕಿದ್ದರು ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಕೆಂಡಾಮಂಡಲರಾಗಿರುವ ಮಾಜಿ ಸಿಎಂ ಕುಮಾರಸ್ವಾಮಿ ಅವರು, ಪದೇ ಪದೇ ನನ್ನನ್ನು ಕೆಣಕಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು, ರಾಜಕೀಯ ತೆವಲಿಗೆ ಸಿದ್ದರಾಮ್ಯಯ ಅವರು ಏನೋನೋ ಮಾತಾಡೋದು ಬೇಡ. ಅವರಿಗೆ ಜಾತಿ ಸಮೀಕ್ಷೆಗೆ ಅಡ್ಡಗಾಲು ಹಾಕಿದ್ದು, ನಿನ್ನೆ ರಾತ್ರಿ ಅವರಿಗೆ ಕನಸ್ಸು ಬಿದ್ದಿದಂತಾ? ನನ್ನ ವಿರುದ್ಧ ಟೀಕೆ ಮಾಡಲು ಬೇರೆ ವಿಚಾರಗಳು ಇಲ್ಲ. ಆದ್ದರಿಂದ ಜನರನ್ನು ಮರಳು ಮಾಡಲು ಬತ್ತಳಿಕೆಯಲ್ಲಿ ಯಾವುದೇ ಅಸ್ತ್ರಗಳು ಇಲ್ಲ. ಆದ್ದರಿಂದ ಹಳೆಯದನ್ನು ಮತ್ತೆ ಕೆದಕಿಕೊಂಡು ಹೊರಟಿದ್ದಾರೆ ಎಂದು ಆರೋಪಿಸಿದರು.
ಸಮ್ಮಿಶ್ರ ಸರ್ಕಾರದಲ್ಲಿ ಸಮನ್ವಯ ಸಮಿತಿ ಅಧ್ಯಕ್ಷರಾಗಿ ಸಿದ್ದರಾಮಯ್ಯ ಇದ್ದರು. ಆ ವೇಳೆ ಒಂದೂ ದಿನವೂ ಸಮೀಕ್ಷೆ ವಿಚಾರ ಚರ್ಚೆಯೇ ಮಾಡಿಲ್ಲ. ಕಾಂಗ್ರೆಸ್‍ನ ಮಂತ್ರಿಗಳು ಈ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಯಾಕೆ ಸುಳ್ಳು ಹೇಳ್ಳುತ್ತಾರೆ. ಬೇರೆ ವಿಷಯ ಅವರ ಬಳಿ ಇಲ್ಲ. ಹೀಗಾಗಿ ನನ್ನ ಮೇಲೆ ಅಪಾದನೆ ಮಾಡುತ್ತಿದ್ದಾರೆ. ಈಗ ಹಿಂದುಳಿದವರ ಬಗ್ಗೆ ಅವರಿಗೆ ಪ್ರೀತಿ ಬಂದಿದೆ. ಪದೇ ಪದೇ ನನ್ನನ್ನು ಕೆಣಕಬೇಡಿ ಎಚ್ಚರಿಕೆ ಕೊಡ್ತಿದ್ದೇನೆ. ನನ್ನ ಬಗ್ಗೆ ಮಾತಾಡುವಾಗ ಎಚ್ಚರಿಕೆ ಇರಲಿ. ನಿಮ್ಮ ತೆವಲಿಗೆ ಸಮಾಜಗಳನ್ನು ನನ್ನ ವಿರುದ್ಧ ಎತ್ತಿಕಟ್ಟಿದ್ದೀರಾ ಗೊತ್ತಿದೆ. ರಾಜಕೀಯದ ತೆವಲು ತೀರಿಸಿಕೊಳ್ಳಲು ಹೊರಟಿದ್ದೀರು. ಇದು ಬಹಳ ದಿನ ನಡೆಯುವುದಿಲ್ಲ ಎಂದರು.
ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದಾಗ ಅವತ್ತು ನಿಮಗೆ ಜವಾಬ್ದಾರಿ ಇರಲಿಲ್ಲವಾ? ಅವತ್ತು ನಾನು ವಿರೋಧ ಮಾಡಿದ್ದರೇ ಅವತ್ತೆ ಸಮ್ಮಿಶ್ರ ಸರ್ಕಾರದ ಬೆಂಬಲ ವಾಪಸ್ ಪಡೆಯಬೇಕಿತ್ತು. ಈಗ ಈಶ್ವರಪ್ಪನಿಗೆ ನಮೋ ನಮೋ ಅಂತಿದ್ದೀರಾ? ಸಿದ್ದರಾಮಯ್ಯ ಅವರಿಗೆ ನನ್ನ ಭಯ ಇದೆ. ಜನರಿಂದ ಮತ್ತೆ ಮೇರೆ ಬರುತ್ತೇನೆ ಎಂಬ ಸೂಚನೆ ಅವರಿಗೆ ಇದೆ. ಈಗ ನನಗೆ ಹಿನ್ನೆಡೆ ಆಗಿರಬಹುದು. ಆದರೆ ಈ ರಾಜ್ಯದ ಜನ ಜಾತಿ-ಭೇದ ಮರೆತು ಮತ್ತೆ ಕುಮಾರಸ್ವಾಮಿ ಬೇಕು ಅನ್ನುವ ದಿನಗಳು ಬರುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಿದ್ದರಾಮಯ್ಯಗೆ ಬಿಜೆಪಿ ಕಣ್ಣಿಗೆ ಕಾಣಿಸುತ್ತಿಲ್ಲ. ಜೆಡಿಎಸ್ ಮಾತ್ರ ಕಾಣುತ್ತಿದೆ. ಅವರಿಗೆ ಜೆಡಿಎಸ್ ಮುಗಿಸಬೇಕು. ಏಕೆಂದರೆ ಅವರನ್ನು ಬೆಳೆಸಿದ್ದೇವು ಅಲ್ವಾ, ಆ ತಪ್ಪಿಗೆ. ಹೀಗಾಗಿ ನನ್ನ ಬಗ್ಗೆ ಸಿದ್ದರಾಮಯ್ಯ ಪದೇ ಪದೇ ಮಾತಾಡುವುದು ಬೇಡ ಎಂದರು. ಇದೇ ವೇಳೆ ಸಿಎಂ ಪುತ್ರ ವಿಜಯೇಂದ್ರ ವಿರುದ್ಧ ಕಿಡಿಕಾರಿದ ಅವರು, ಕೆಆರ್ ಪೇಟೆಯಂತೆ ಶಿರಾ ಮುಗಿಸ್ತೀನಿ ಅಂತಾ ಸಿಎಂ ಪುತ್ರ ಹೇಳಿದ್ದಾರೆ. ಅವರು ಜನರಿಗೆ ಕುಡಿಸಿ ಬೀದಿ ಬೀದಿಯಲ್ಲಿ ಮಲಗಿಸಿದ್ದಾರೆ. ಇದು ಮಾಧ್ಯಮಗಳಲ್ಲೇ ಬಂದಿದೆ. ನಾಮಪತ್ರ ಸಲ್ಲಿಕೆ ವೇಳೆ ಯುವಕರಿಗೆ ಕುಡಿಸಿ, ರಸ್ತೆಯಲ್ಲೇ ಮಲಗಿಸಿದ್ದಾರೆ. ಪಾಪದ ಹಣ ತಗೊಂಡು ಹೋಗಿ ಶಿರಾದಲ್ಲಿ ಕುಳಿತಿದ್ದೀರಲ್ಲ. ಅದೇ ದುಡ್ಡನ್ನು ತಗೊಂಡು ಹೋಗಿ ಬೀದಿಯಲ್ಲಿ ಇರುವ ಜನರಿಗೆ ಕೊಡಬೇಕಿತ್ತು. ಅಲ್ಲಿ ಅವರ ಕಷ್ಟ ಸುಖ ಕೇಳಲು ಕನಿಷ್ಠ ಸೌಜನ್ಯಕ್ಕಾದ್ರು ಹೋಗಿದ್ದೀರಾ? ನನಗೆ ಇಷ್ಟೆಲ್ಲಾ ನೋವು ಇದ್ರು, ಉತ್ತರ ಕರ್ನಾಟಕ ಭಾಗದಲ್ಲಿ ಜನರು ನನ್ನನ್ನು ಕೈ ಬಿಟ್ಟಿದ್ದರು. ಆ ಭಾಗದ ಜನರ ಕಷ್ಟಗಳಿಗೆ ನಾನು ಸ್ಪಂದಿಸುತ್ತಿದ್ದೇನೆ ಎಂದರು.
ಮಧು ಬಂಗಾರಪ್ಪ ಮತ್ತು ಶಾರದಾ ಪೂರ್ಯ ನಾಯಕ್ ಪಕ್ಷ ಬಿಡುವ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಶಾರದ ಪೂರ್ಯ ನಾಯಕ್ ಬಗ್ಗೆ ಮಾತಾಡಬೇಡಿ. ಆಕೆ ನನ್ನ ಸಹೋದರಿ ಇದ್ದಂತೆ. ಇವತ್ತು ಕೂಡಾ ಕಣ್ಣಲ್ಲಿ ನೀರು ಹಾಕಿಕೊಂಡು ನಾನು ಪಕ್ಷ ಬಿಡುವುದಿಲ್ಲ ಎಂದು ಹೇಳಿದ್ದಾರೆ. ಮಧು ಬಂಗಾರಪ್ಪ ಪಕ್ಷ ಬಿಡುವ ಬಗ್ಗೆ ನನಗೆ ಗೊತ್ತಿಲ್ಲ. ನೀವು ಅವರನ್ನೇ ಪ್ರಶ್ನೆ ಮಾಡಿ. ಮಧು ಬಂಗಾರಪ್ಪರನ್ನು ಅವರ ತಂದೆಗಿಂತ ಹೆಚ್ಚಾಗಿ ನಾವು ಬೆಳೆಸಿದ್ದೇವೆ. ಲೋಕಸಭೆ ಚುನಾವಣೆ ಬಳಿಕ ನಾನು ಅವರ ಜೊತೆ ಮಾತಾಡಿಲ್ಲ ಎಂದು ಹೇಳಿದರು.