ಮುಂಬೈ: ಪತ್ನಿ ಜೊತೆ ಔಟಿಂಗ್ ಹೋಗುವಾಗ ಹೆಲ್ಮೆಟ್ ಹಾಗೂ ಮಾಸ್ಕ್ ಹಾಕದ್ದಕ್ಕೆ ನಟ ವಿವೇಕ್ ಒಬೆರಾಯ್ ವಿರುದ್ಧ ಪ್ರಕರಣ ದಾಖಲಾಗಿದ್ದು, ದಂಡ ಸಹ ವಿಧಿಸಲಾಗಿದೆ.
ವ್ಯಾಲೆಂಟೈನ್ಸ್ ಡೇ ದಿನ ಪತ್ನಿ ಜೊತೆ ವಿವೇಕ್ ಒಬೆರಾಯ್ ಔಟಿಂಗ್ ಹೋಗಿದ್ದ ವೀಡಿಯೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದರು. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಈ ವೀಡಿಯೋ ವೈರಲ್ ಆಗಿದ್ದು, ಹೆಲ್ಮೆಟ್ ಹಾಗೂ ಮಾಸ್ಕ್ ಹಾಕದಿರುವುದು ಕಂಡುಬಂದಿದೆ. ಹೀಗಾಗಿ ದಂಡ ಹಾಕಲಾಗಿದೆ.
ಹೆಲ್ಮೆಟ್ ಹಾಕದೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿರುವುದು ಹಾಗೂ ಕೊರೊನಾ ಸಮಯದಲ್ಲಿ ಮಾಸ್ಕ್ ಧರಿಸದೇ ಸಂಚರಿಸಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಇದರಿಂದಾಗಿ ಯುವಕರನ್ನು ತಪ್ಪು ದಾರಿಗೆ ಎಳೆಯಲು ಪ್ರೋತ್ಸಾಹಿಸಿದಂತಾಗುತ್ತದೆ. ಹೀಗಾಗಿ ದಂಡ ಕಟ್ಟಬೇಕು ಎಂದು ಒತ್ತಾಯಿಸಲಾಗಿತ್ತು.
ಇದನ್ನು ಗಮನಿಸಿದ ಮುಂಬೈ ಪೊಲೀಸರು ಕ್ರಮ ಕೈಗೊಂಡಿದ್ದು, ಇ-ಚಲನ್ ನೀಡುವ ಮೂಲಕ ದಂಡ ಹಾಕಿದ್ದಾರೆ. ಹೆಲ್ಮೆಟ್ ಧರಿಸದ್ದಕ್ಕೆ ವಿವೇಕ್ ಒಬೆರಾಯ್ ಅವರಿಗೆ 500 ರೂ.ಗಳ ದಂಡದ ಇ-ಚಲನ್‍ನ್ನು ಸ್ಯಾಂತಾಕ್ರೂಜ್ ವಿಭಾಗದ ಪೊಲೀಸರು ನೀಡಿದ್ದಾರೆ. ಶುಕ್ರವಾರ ಸಂಜೆ 7 ಗಂಟೆಗೆ ಅಸಿಸ್ಟೆಂಟ್ ಇನ್‍ಸ್ಪೆಕ್ಟರ್ ನಂದಕಿಶೋರ್ ಯಾದವ್ ಅವರು ಇ-ಚಲನ್ ನೀಡಿದ್ದಾರೆ.
ದಂಡ ಮಾತ್ರವಲ್ಲದೆ ಮಾಸ್ಕ್ ಧರಿಸದ್ದಕ್ಕೆ ವಿವೇಕ್ ಒಬೆರಾಯ್ ವಿರುದ್ಧ ಮುಂಬೈನ ಜುಹು ಪೊಲೀಸ್ ಠಾಣೆಯಲ್ಲಿ ಫೆಬ್ರವರಿ 19ರಂದು ಎಫ್‍ಐಆರ್ ಸಹ ದಾಖಲಾಗಿದೆ. ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಮಾಸ್ಕ್ ಕಡ್ಡಾಯಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಮೋಟರ್ ವೆಹಿಕಲ್ಸ್ ಆ್ಯಕ್ಟ್‍ನ ಸೆಕ್ಷನ್ 21ರ ಅಡಿ ಸೆಕ್ಷನ್ 129/177 ಅಡಿ ಪ್ರಕರಣ ದಾಖಲಾಗಿದೆ. ಪ್ರಕರಣದ ಕುರಿತು ಮಹಾರಾಷ್ಟ್ರ ಕೋವಿಡ್-19 ಮೀಶರ್ಸ್ 2020ಯ ಜುಹು ಠಾಣೆಯ ಸಬ್ ಇನ್‍ಸ್ಪೆಕ್ಟರ್ ಕಾಂಬ್ಳೆ ಅವರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ. ಇಂದು ಪೊಲೀಸರು ವಿವೇಕ್ ಒಬೆರಾಯ್ ಅವರ ಮನೆಗೆ ಹೇಳಿಕೆ ಪಡೆಯಲು ತೆರಳಿದ್ದು, ಈ ವೇಳೆ ಅವರು ದೆಹಲಿಗೆ ತರಳಿದ್ದಾರೆ ಎಂದು ಮನೆಯವರು ತಿಳಿಸಿದ್ದಾರೆ.
View this post on Instagram
ದಂಡ ಬಿದ್ದಿದ್ಯಾಕೆ?
ವ್ಯಾಲೆಂಟೈನ್ಸ್ ಡೇ ದಿನ ನಟ ವಿವೇಕ್ ಒಬೆರಾಯ್ ಅವರು ಹಾರ್ಲೆ ಡೆವಿಡ್ಸನ್ ಬೈಕ್ ಮೇಲೆ ಪತ್ನಿಯನ್ನು ಕೂರಿಸಿಕೊಂಡು ತೆರಳುತ್ತಿದ್ದರು. ಈ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದರು. ಬಳಿಕ ಈ ವಿಡಿಯೋ ವೈರಲ್ ಆಗಿತ್ತು. ವ್ಯಾಲೆಂಟೈನ್ಸ್ ಡೇ ಹೇಗೆ ಆರಂಭಿಸಬೇಕು ಎನ್ನುತ್ತಲೇ ನಾನು ನನ್ನ ಪತ್ನಿ ಜಾಯ್ ರೈಡ್ ಮೂಲಕ ರಿಫ್ರೆಶ್ ಆಗುತ್ತಿದ್ದೇವೆ ಎಂದು ಬರೆದುಕೊಂಡಿದ್ದರು.