ರಾಯಚೂರು: ಜಿಲ್ಲೆಯ ದೇವದುರ್ಗ ಪೊಲೀಸ್ ಠಾಣೆಯಲ್ಲಿ ದರ್ಪ ಮೆರೆದು ಪೊಲೀಸರಿಗೆ ಅವಾಜ್ ಹಾಕಿದ್ದ ಭೂಪನ ವಿರುದ್ಧ ಕೊನೆಗೂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ.
ಮಲ್ಲೇಶ್ ಪೂಜಾರಿ ಬಂಧಿತ ಆರೋಪಿ. ತನ್ನ ವಿರುದ್ಧ ಪತ್ನಿ ನೀಡಿದ ದೂರು ಸ್ವೀಕರಿಸಿದ್ದಕ್ಕೆ ಪೊಲೀಸರಿಗೆ ಅವಾಜ್ ಹಾಕಿ ಬೆದರಿಸಿದ್ದ. ಅವಾಚ್ಯ ಶಬ್ದ ಬಳಸಿ, ಟೇಬಲ್ ಗುದ್ದಿ ಪೊಲೀಸರ ವಿರುದ್ಧ ಹಾರಾಡಿದ್ದ ಮಲ್ಲೇಶ್‍ನನ್ನ ಪೊಲೀಸರು ಹಾಗೇ ಬಿಟ್ಟು ಕಳುಹಿಸಿದ್ದರು. ಆದರೆ ಮಲ್ಲೇಶ್ ಸಿಬ್ಬಂದಿಗೆ ಬೈದು ಬೆದರಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಪೊಲೀಸರು ಮಲ್ಲೇಶ್ ವಿರುದ್ಧ ಯಾವುದೇ ಕ್ರಮಕೈಗೊಳ್ಳದ ಹಿನ್ನೆಲೆ ಪೊಲೀಸರ ಪರಸ್ಥಿತಿಯೇ ಹೀಗಾದರೆ ಸಾಮಾನ್ಯ ಜನರ ಗತಿ ಏನು ಎಂದು ಜನರು ಪಶ್ನಿಸಿದ್ದರು. ಕೊನೆಗೆ ಸರ್ಕಾರಿ ಕೆಲಸಕ್ಕೆ ಅಡ್ಡಿ ಪಡಿಸಿದ ಆರೋಪದಲ್ಲಿ ಮಲ್ಲೇಶ್ ವಿರುದ್ಧ ಪ್ರಕರಣ ದಾಖಲಾಗಿದೆ. ಹೆಡ್ ಕಾನ್ಸಟೇಬಲ್ ಕೃಷ್ಣಾ ಅವರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. ಪತ್ರಕರ್ತನ ಸೋಗಿನಲ್ಲಿ ಪೊಲೀಸರಿಗೆ ಅವಾಜ್ ಹಾಕಿ ಬೆದರಿಸಿದ್ದ ಆರೋಪಿ ಮಲ್ಲೇಶ್ ಈಗ 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾನೆ.