– ನಿತ್ಯ ಮದ್ಯ ಸೇವಿಸಿ, ಕಿರುಕುಳ ನೀಡ್ತಿದ್ದ ಪತಿ
ಶಿವಮೊಗ್ಗ: ಪತಿ ಹಾಗೂ ಆತನ ಮನೆಯವರ ಕಿರುಕುಳ ತಾಳಲಾರದೆ ಗೃಹಿಣಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಸಾಗರ ತಾಲೂಕಿನ ಜೋಗದಲ್ಲಿ ನಡೆದಿದೆ.
ಮೃತ ಗೃಹಿಣಿಯನ್ನು ಸಂಧ್ಯಾ(25) ಎಂದು ಗುರುತಿಸಲಾಗಿದೆ. ಮಗಳ ಸಾವಿಗೆ ಆಕೆಯ ಪತಿಯ ಮನೆಯವರೇ ಕಾರಣ ಎಂದು ಮಹಿಳೆಯ ಪೋಷಕರು ಆರೋಪಿಸಿದ್ದಾರೆ. ನಿನ್ನೆ ರಾತ್ರಿ ಮನೆಯಲ್ಲೇ ವಿಷ ಸೇವಿಸಿದ್ದ ಸಂಧ್ಯಾ ಅವರನ್ನು ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಂಧ್ಯಾ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ.
ಮೃತ ಸಂಧ್ಯಾ ಕಳೆದ 7 ವರ್ಷದ ಹಿಂದೆ ಮಧುಸೂದನ್ ಜೊತೆ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಆದರೆ ಮದುವೆಯಾದ ದಿನದಿಂದಲೂ ಪತಿ ದಿನನಿತ್ಯ ಮದ್ಯ ಸೇವಿಸಿ ಬಂದು ಪತ್ನಿಗೆ ಕಿರುಕುಳ ನೀಡುತ್ತಿದ್ದ ಎಂದು ಸಂಧ್ಯಾ ಪೋಷಕರು ಆರೋಪಿಸಿದ್ದಾರೆ.
ಘಟನೆ ಕುರಿತು ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಪತಿ ಮಧುಸೂದನ್ ನನ್ನು ವಶಕ್ಕೆ ಪಡೆದಿದ್ದಾರೆ. ಅಂತ್ಯ ಸಂಸ್ಕಾರದ ವೇಳೆ ಸಹ ಜಟಾಪಟಿ ನಡೆದಿದ್ದು, ಮೃತಳ ಶವವನ್ನು ಆಕೆಯ ತವರೂರು ಆನಂದಪುರದಲ್ಲಿ ಪೊಲೀಸರ ಮಧ್ಯಸ್ಥಿಕೆಯಲ್ಲಿ ಅಂತ್ಯಸಂಸ್ಕಾರ ಮಾಡಲಾಗಿದೆ.