ನವದೆಹಲಿ: ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ್ ಕತ್ತಿ ಅವರು ನವದೆಹಲಿಯಲ್ಲಿಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ರಾಜ್ಯ ಸಚಿವ ರಾವ್ ಸಾಹೇಬ್ ದಾನ್ವೆ ಅವರನ್ನು ಭೇಟಿಯಾಗಿ ರಾಜ್ಯದ ಪಡಿತರ ವ್ಯವಸ್ಥೆಯ ಸ್ಥಿತಿಗತಿ ಬಗ್ಗೆ ಹಾಗೂ ಪಡಿತರ ವ್ಯವಸ್ಥೆಯಲ್ಲಿ ರಾಗಿ ಮತ್ತು ಜೋಳ ವಿತರಣೆ ಬಗ್ಗೆ ಚರ್ಚಿಸಿದರು.
ಪ್ರಸ್ತುತ ಪಡಿತರ ಸರಬರಾಜು ವ್ಯವಸ್ಥೆಯಲ್ಲಿ ಅಕ್ಕಿ ಮತ್ತು ಗೋಧಿಯನ್ನು ವಿತರಣೆ ಮಾಡಲಾಗುತ್ತಿದೆ. ಅಕ್ಕಿ ಮತ್ತು ಗೋಧಿ ವಿತರಣೆಯನ್ನು ಕಡಿತಗೊಳಿಸಿ, ಕಡಿತಗೊಳಿಸಿದ ಪ್ರಮಾಣಕ್ಕೆ ಪರ್ಯಾಯವಾಗಿ ರಾಗಿ-ಜೋಳ ಸ್ಥಳೀಯ ಧಾನ್ಯಗಳನ್ನು ವಿತರಿಸಲು ಅವಕಾಶ ಮಾಡಿಕೊಡಬೇಕೆಂಬ ಪ್ರಮುಖ ಬೇಡಿಕೆಯ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಭೌಗೋಳಿಕವಾಗಿ ಸ್ಥಳೀಯ ಜನರ ಆಹಾರ ಪದ್ಧತಿಗೆ ಅನುಸಾರವಾಗಿ ಪಡಿತರ ವ್ಯವಸ್ಥೆಯನ್ನು ವಿತರಣೆ ಮಾಡಬೇಕಾಗುತ್ತದೆ. ಪ್ರಸ್ತುತ ಅಕ್ಕಿ ಮತ್ತು ಗೋಧಿಯನ್ನು ಮಾತ್ರ ಸರಬರಾಜು ಮಾಡಲಾಗುತ್ತಿದೆ. ಭೌಗೋಳಿಕ ಆಹಾರ ಪದ್ಧತಿಗೆ ವಿರುದ್ಧವಾಗಿ ಒಂದೇ ವಿಧದ ಆಹಾರ ಸೇವನೆಯಿಂದ ಜನರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ ಹಾಗೂ ಒಂದು ಪ್ರದೇಶದ ರೈತರಿಗೆ ಮಾತ್ರ ಲಾಭವಾಗುತ್ತಿದ್ದು, ಸ್ಥಳೀಯ ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಲಭಿಸುತ್ತಿಲ್ಲ, ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅಕ್ಕಿ, ಗೋಧಿ ಪ್ರಮಾಣವನ್ನು ಕಡಿತಗೊಳಿಸಿ, ಕಡಿತಗೊಳಿಸಿದ ಪ್ರಮಾಣದ ಸಬ್ಸಿಡಿ ದರವನ್ನು ಕರ್ನಾಟಕದ ಆಹಾರ ಪದ್ದತಿಯಲ್ಲಿ ಬಳಸುವ ರಾಗಿ, ಜೋಳ, ಸ್ಥಳೀಯ ಧಾನ್ಯಗಳ ಖರೀದಿಗೆ ಅವಕಾಶ ನೀಡಬೇಕೆಂದು ಮನವಿ ಮಾಡಲಾಯಿತು.
ಮನವಿ ಕುರಿತು ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಸಚಿವ ರಾವ್ ಸಾಹೇಬ್ ದಾನ್ವೆ, ಕರ್ನಾಟಕ ಆಹಾರ ಇಲಾಖೆಯ ಅಲೋಚನೆ ಜನರ ಹಿತದೃಷ್ಟಿಯಿಂದ ಅತ್ಯುತ್ತಮವಾದದ್ದು, ಇದರ ಅನುಷ್ಠಾನಕ್ಕೆ ಚಾಲ್ತಿಯಲ್ಲಿರುವ ನೀತಿಯನ್ನು ಬದಲಾವಣೆ ಮಾಡಬೇಕು. ಈ ಬಗ್ಗೆ ಉನ್ನತ ಮಟ್ಟದ ಸಭೆಯಲ್ಲಿ ಚರ್ಚಿಸಿ ಹೊಸ ಪಾಲಿಸಿ ಅನುಷ್ಠಾನಕ್ಕೆ ಕ್ರಮವಹಿಸಲಾಗುವುದೆಂದು ತಿಳಿಸಿದರು.
ಈ ವೇಳೆ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ, ಇಲಾಖೆಯ ಕಾರ್ಯದರ್ಶಿ ಬಿ.ಹೆಚ್. ಅನಿಲ್ ಕುಮಾರ್, ಕೇಂದ್ರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.