ಮಂಗಳೂರು:ಯಕ್ಷಗಾನದ ಅಧ್ಯಯನದ ಉತ್ತಮ ಅವಕಾಶಗಳನ್ನು ಬಳಸಿಕೊಳ್ಳುವ ಜಾಣ್ಮೆ ನಮ್ಮದಾಗಬೇಕು ಎಂದು ಚಿಕ್ಕಮಗಳೂರಿನ ವೇದವಿಜ್ಞಾನ ಮಂದಿರದ ಬ್ರಹ್ಮರ್ಷಿ ಕೆ. ಎಸ್. ನಿತ್ಯಾನಂದ ಹೇಳಿದರು.
ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಪಾವಂಜೆಯ ಮೇಳವನ್ನು ಉದ್ಘಾಟಿಸಿ ಆಶೀರ್ವಚನ ನೀಡಿ ಮಾತನಾಡಿದ ಅವರು, ಯಕ್ಷಗಾನ ನಮ್ಮ ಸಂಸ್ಕೃತಿ ಮಾತ್ರವಲ್ಲ ಅದು ಆರಾಧನೆಯಾಗಿದೆ, ಇಂದಿನ ಯಾನಾರಂಭ ನಿರಂತರ ಮುಂದುವರಿಯಲಿ ಎಂದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ದೇವಳದ ಆಡಳಿತ ಮೊಕ್ತೇಸರ ಎಂ. ಶಶೀಂದ್ರ ಕುಮಾರ್ ದಾನಿಗಳನ್ನು ಗೌರವಿಸಿದರು. ಉದ್ಘಾಟನೆಗೂ ಮೊದಲು ಸೇವಾದಾರರು ನೀಡಿದ ಬೆಳ್ಳಿಯ ಅಭರಣಗಳನ್ನು ಮೆರವಣಿಗೆ ಮೂಲಕ ಚೌಕಿಗೆ ತರಲಾಗಿತು. ಸೇವಾ ಬಯಲಾಟದ ಅಂಗವಾಗಿ ಪಾಂಡವಾಶ್ವಮೇಧ ಯಕ್ಷನಾನ ನಡೆಯಿತು.
ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಮೂಲ್ಕಿ ಸೀಮೆಯ ಅರಸರಾದ ಎಂ.ದುಗ್ಗಣ್ಣ ಸಾವಂತರು, ಸವಣೂರು ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸೀತಾರಾಮ ರೈ ಸವಣೂರು, ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಪೂಂಜ, ದ.ಕ. ಜಿ.ಪಂ. ಸದಸ್ಯ ವಿನೋದ್‌ಕುಮಾರ್ ಬೊಳ್ಳೂರು,ತಾ.ಪಂ. ಸದಸ್ಯ ಜೀವನ್‌ಪ್ರಕಾಶ್ ಕಾಮೆರೊಟ್ಟು, ಮಂಗಳೂರು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್‌ಕುಮಾರ್ ರೈ ಮಾಲಾಡಿ, ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಡಾ. ಎಂ. ಮೋಹನ್ ಆಳ್ವ, ಭುಜಬಲಿ ಧರ್ಮಸ್ಥಳ ಮತ್ತಿತರರು ಉಪಸ್ಥಿತರಿದ್ದರು.
ಅಡ್ಯಾರು ಪುರುಷೋತ್ತಮ ಭಂಡಾರಿ ಸ್ವಾಗತಿಸಿದರು, ಮೇಳದ ಭಾಗವತರು ಹಾಗೂ ಸಂಚಾಲಕ ಪಟ್ಲ ಸತೀಶ್ ಶೆಟ್ಟಿ ಪ್ರಸ್ತಾವನೆಗೈದರು. ಕರ್ನಾಟಕ ಯಕ್ಷಗಾನ ಮಂಡಳಿಯ ಸದಸ್ಯ ಕದ್ರಿ ನವನೀತ್ ಶೆಟ್ಟಿ ನಿರೂಪಿಸಿದರು. ಧರ್ಮದರ್ಶಿ ಡಾ. ಯಾಜಿ ನಿರಂಜನ್ ಭಟ್ ಮೇಳದ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು.