– ಮನೆ ಕಟ್ಟಲು ಕೂಡಿಟ್ಟ ಹಣ ಭಸ್ಮ
ಕಲಬುರಗಿ: ಪಕ್ಕದ ಮನೆಯವರ ಗ್ಯಾಸ್ ಬಳಸಲು ಹೋಗಿ ಮನೆಗೇ ಬೆಂಕಿ ಹೊತ್ತಿಕೊಂಡ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಸಂಕನೂರ ಗ್ರಾಮದಲ್ಲಿ ನಡೆದಿದೆ.
ಗ್ಯಾಸ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡು ಮನೆ ಸುಟ್ಟು ಕರಕಲಾಗಿದೆ. ಫಾತಿಮಾ ಎನ್ನುವ ಚಿಕನ್ ವ್ಯಾಪಾರಿಯ ಮನೆ, ನಗದು, ಧವಸ ಧಾನ್ಯ ಅಗ್ನಿಗಾಹುತಿಯಾಗಿದೆ. ಬೆಂಕಿ ಹತ್ತಿಕೊಂಡ ತಕ್ಷಣ ಮನೆ ಬಿಟ್ಟು ಹೊರಹೋಗಿದ್ದರಿಂದ ಮಹಿಳೆ ಭಾರೀ ಅನಾಹುತದಿಂದ ಪಾರಾಗಿದ್ದಾರೆ.
ಪಕ್ಕದ ಮನೆಯವರು ಊರಿಗೆ ಹೋಗುವಾಗ ಫಾತಿಮಾಗೆ ತಮ್ಮ ಗ್ಯಾಸ್ ಬಳಸಲು ಕೊಟ್ಟಿದ್ದರು. ಆದರೆ ಗ್ಯಾಸ್ ಲೀಕೇಜ್ ಆಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಸಿಲಿಂಡರ್ ಸ್ಫೋಟಗೊಂಡಿದೆ. ಪರಿಣಾಮ ಮನೆ ಕಟ್ಟಲು ಅಂತ ಫಾತಿಮಾ ಕೂಡಿಟ್ಟಿದ್ದ ಎರಡು ಲಕ್ಷ ರೂ. ನಗದು ಬೆಂಕಿಗಾಹುತಿಯಾಗಿದೆ.
ಅರ್ಧಭಾಗ ಸುಟ್ಟು ಕರಕಲಾದ ನೂರಾರು ನೋಟುಗಳು ಬೆಂಕಿಗಾಹುತಿಯಾದ ಮನೆಯಲ್ಲಿ ಪತ್ತೆಯಾಗಿವೆ. 9 ಕೋಳಿಗಳು, ಫ್ರಿಡ್ಜ್, ಧವಸಧಾನ್ಯ, ಬಟ್ಟೆ ಬರೆ ಸೇರಿ ಒಂದು ಲಕ್ಷ ಎಂಬತ್ತು ಸಾವಿರ ರೂ. ವಸ್ತುಗಳು ಭಸ್ಮವಾಗಿವೆ.
ಈ ಕುರಿತು ಚಿತ್ತಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.