ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನೀರವ್ ಮೋದಿ ಕುಟುಂಬಕ್ಕೆ ಸಂಕಷ್ಟ ಎದುರಾಗಿದೆ. ನೀರವ್ ಮೋದಿ ಪತ್ನಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಲಾಗಿದೆ.
ಅಂತಾರಾಷ್ಟ್ರೀಯ ಕಾನೂನು ಜಾರಿ ಸಂಸ್ಥೆ ಇಂಟರ್ ಪೋಲ್ ಈ ನೋಟಿಸ್ ಜಾರಿ ಮಾಡಿದ್ದು, ಬಾಕಿ ಕುಟುಂಬ ಸದಸ್ಯರಿಗೆ ಬಂಧನದ ವಾರಂಟ್ ನೀಡಿದೆ ಎಂದು ವರದಿಯಾಗಿದೆ. ಮತ್ತೊಂದು ಕಡೆ ನೀರವ್ ಮೋದಿ ಹೂಡಿಕೆಯ ಕಂಪನಿಗಳ ಮುಖ್ಯಸ್ಥರನ್ನು ಜಾರಿ ನಿರ್ದೇಶನಾಲಯ(ಇಡಿ) ತನಿಖೆ ಮಾಡುತ್ತಿದೆ.
ಪ್ರಕರಣ ಸಂಬಂಧ ನೀರವ್ ಮೋದಿಯನ್ನು ಕಳೆದ ವರ್ಷ ಲಂಡನ್ ನಲ್ಲಿ ಬಂಧಿಸಲಾಗಿದ್ದು, ಭಾರತಕ್ಕೆ ಹಸ್ತಾಂತರಿಸುವ ಬಗ್ಗೆ ವೇಸ್ಟ್ ಮಿನಿಸ್ಟರ್ ಕೋರ್ಟಿನಲ್ಲಿ ಕಾನೂನು ಪ್ರಕ್ರಿಯೆಗಳು ನಡೆಯುತ್ತಿದೆ. ಸೆಪ್ಟೆಂಬರ್ ನಲ್ಲಿ ಅಂತಿಮ ವಿಚಾರಣೆಗೆ ಸಮಯ ನಿಗದಿ ಮಾಡಿತ್ತು. ಆದರೆ ಲಂಡನ್ ನಲ್ಲಿ ಕೊರೊನಾ ಸಮಸ್ಯೆ ಹಿನ್ನೆಲೆ ವಿಚಾರಣೆ ವಿಳಂಬವಾಗಿದೆ.
ಪ್ರಕರಣ ಸಂಬಂಧ ನೀರವ್ ಮೋದಿ ಪತ್ನಿ ಮತ್ತು ಕುಟುಂಬಸ್ಥರ ಮೇಲೆ ಅನುಮಾನ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ರೆಡ್ ಕಾರ್ನರ್ ನೋಟಿಸ್ ನೀಡಿದ್ದು ಮೋದಿ ಕುಟುಂಬದ ಮೇಲೆ ಇಡಿ ತನಿಖಾ ಸಂಸ್ಥೆ ಹದ್ದಿನ ಕಣ್ಣು ಇಟ್ಟಿದೆ.
ನಕಲಿ ದಾಖಲೆಗಳನ್ನು ಸೃಷ್ಟಿಸಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಿಂದ 13,500 ಸಾಲ ಪಡೆದು ಕೋಟಿ ಸಾಲ ಪಡೆದಿದ್ದ ಉದ್ಯಮಿ ನೀರವ್ ಮೋದಿ ಬಂಧನ ಭೀತಿ ಹಿನ್ನೆಲೆ ವಿದೇಶಕ್ಕೆ ಪಲಾಯನ ಮಾಡಿದ್ದರು. 2019 ಡಿಸೆಂಬರ್ ನಲ್ಲಿ ಇವರನ್ನು ಆರ್ಥಿಕ ಅಪರಾಧಿ ಎಂದು ಘೋಷಿಸಲಾಗಿತ್ತು.
ಏನಿದು ರೆಡ್ ಕಾರ್ನರ್ ನೋಟಿಸ್?
ಸ್ವದೇಶದಲ್ಲಿ ಯಾವುದೇ ಒಬ್ಬ ವ್ಯಕ್ತ ಅಪರಾಧಿ ಹಿನ್ನೆಲೆಯಲ್ಲಿ ದೇಶವನ್ನು ತೊರೆದು ವಿದೇಶದಲ್ಲಿ ತಲೆಮರೆಸಿಕೊಂಡಿದ್ದರೆ, ಅಂತಹ ವ್ಯಕ್ತಿಯನ್ನು ಹುಡುಕಿ ಬಂಧಿಸಿ ಅವನನ್ನು ಮರಳಿ ಆ ದೇಶಕ್ಕೆ ಹಸ್ತಾಂತರಿಸುವಂತೆ ಇಂಟರ್ ಪೋಲ್ ಹೊರಡಿಸುವ ನೋಟಿಸಿಗೆ ರೆಡ್ ಕಾರ್ನರ್ ನೋಟಿಸ್ ಎಂದು ಕರೆಯಲಾಗುತ್ತದೆ.