ಚೆನ್ನೈ: ನ್ಯಾಯಾಧೀಶರ ಪತ್ನಿಯರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ನಿವೃತ್ತ ನ್ಯಾಯಾಮೂರ್ತಿ ಸಿಎಸ್ ಕರ್ಣನ್ ಅವರನ್ನು ಬಂಧಿಸಲಾಗಿದೆ.
ಕರ್ಣನ್ ಅವರು ಹೈಕೋರ್ಟ್ ನ್ಯಾಯಾಧೀಶರ ಪತ್ನಿಯರು ಮತ್ತು ಮಹಿಳಾ ನ್ಯಾಯಾಮೂರ್ತಿಗಳು ಹಾಗೂ ಕೋರ್ಟಿನಲ್ಲಿ ಕೆಲಸ ಮಾಡುವ ಮಹಿಳಾ ಸಿಬ್ಬಂದಿ ವಿರುದ್ಧ ಅಸಭ್ಯವಾಗಿ ಮಾತನಾಡಿ, ಆ ವಿಡಿಯೋವನ್ನು ಯೂಟ್ಯೂಬ್‍ಗೆ ಅಪ್ಲೋಡ್ ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು.
ಈ ವಿಚಾರವಾಗಿ ಕರ್ಣನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮದ್ರಾಸ್ ಹೈಕೋರ್ಟಿನ ಹಿರಿಯ ವಕೀಲರೊಬ್ಬರು ಸುಪ್ರೀಂ ಕೋರ್ಟ್ ಮುಖ್ಯನ್ಯಾಯಾಧೀಶ ಎಸ್‍ಎ ಬೊಬ್ಡೆ ಅವರಿಗೆ ಪತ್ರ ಕೂಡ ಬರೆದಿದ್ದರು. ನಂತರ ವಕೀಲರೊಬ್ಬರು ಕರ್ಣನ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರನ್ನು ದಾಖಲಿಸಿಕೊಂಡಿದ್ದ ಚೆನ್ನೈ ಸೈಬರ್ ಕ್ರೈಮ್ ವಿಭಾಗದ ಪೊಲೀಸರು ಒಂದು ತಿಂಗಳು ತನಿಖೆ ಮಾಡಿ ಇಂದು ಕರ್ಣನ್ ಅವರನ್ನು ಬಂಧಿಸಿದ್ದಾರೆ.
ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಲ್ಲಿರುವ ಕರ್ಣನ್ ಮೊದಲು 2009ರಲ್ಲಿ ಮದ್ರಾಸ್ ಹೈಕೋರ್ಟಿನಲ್ಲಿ ನ್ಯಾಯಾಮೂರ್ತಿಯಾಗಿದ್ದರು. ನಂತರ 2016ರಲ್ಲಿ ಕೋಲ್ಕತ್ತಾ ಹೈಕೋರ್ಟಿಗೆ ನ್ಯಾಯಾಧೀಶರನ್ನಾಗಿ ನೇಮಕ ಮಾಡಲಾಗಿತ್ತು. ಆದರೆ 2017ರಲ್ಲಿ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಕರ್ಣನ್ ಅವರನ್ನು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಅವರು ಆರು ತಿಂಗಳು ಜೈಲುವಾಸ ಕೂಡ ಅನುಭವಿಸಿದ್ದರು.