– ಕೊರೊನಾ ವ್ಯಾಕ್ಸಿನ್‍ಗಾಗಿ ಆಸ್ಪತ್ರೆಗೆ ಬಂದವರಿಗೆ ನಿರಾಸೆ
ಭುವನೇಶ್ವರ: ಓಡಿಶಾದಲ್ಲಿ ಕೊರೊನಾ ಲಸಿಕೆಗೆ ಹಾಹಾಕಾರ ಉಂಟಾಗಿದ್ದು, ಶೀಘ್ರವೇ ವ್ಯಾಕ್ಸಿನ್ ಪೂರೈಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಈಗಾಗಲೇ ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶದಲ್ಲಿ ಕೊರೊನಾ ಲಸಿಕೆಯ ಕುರಿತು ವರದಿಗಳು ಪ್ರಕಟಗೊಂಡಿವೆ. ಸದ್ಯ ಓಡಿಶಾದಲ್ಲಿರುವ 1,00 ಕೇಂದ್ರಗಳ ಪೈಕಿ 700 ಲಸಿಕಾ ಸೆಂಟರ್ ಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.
ಓಡಿಶಾದ ಆರೋಗ್ಯ ಸಚಿವ ಕಿಶೋರ್ ದಾಸ್, ಕೊರೊನಾ ಲಸಿಕೆ ಪೂರೈಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ರಾಜ್ಯದ ಕೆಲವು ಭಾಗಗಳಲ್ಲಿ ಲಸಿಕಾ ವಿತರಣೆ ಸ್ಥಗಿತಗೊಂಡಿದೆ. ಸದ್ಯ ನಮ್ಮಲ್ಲಿ ಎರಡು ದಿನಕ್ಕೆ ಆಗುವಷ್ಟು ಲಸಿಕೆ ಇದೆ. ಎರಡು ದಿನಗಳಲ್ಲಿ ಲಸಿಕೆ ಬರದಿದ್ರೆ ಇಡೀ ರಾಜ್ಯದಲ್ಲಿ ಕೊರೊನಾ ವ್ಯಾಕ್ಸಿನ್ ಅಭಿಯಾನ ಸಂಪೂರ್ಣವಾಗಿ ನಿಲ್ಲಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸದ್ಯ ನಮ್ಮ ಬಳಿ 5.4 ಲಕ್ಷ ಡೋಸ್ ಲಸಿಕೆ ಲಭ್ಯವಿದೆ. ಮುಂದಿನ ಎರಡು ದಿನ ನೋಂದಾಯಿತರಿಗೆ ಲಸಿಕೆ ನೀಡಲಾಗುವುದು. ಪ್ರತಿ ದಿನ ಎರಡೂವರೆ ಲಕ್ಷ ಡೋಸ್ ಲಸಿಕೆ ನೀಡುತ್ತಿದ್ದು, ಸ್ಟಾಕ್ ಖಾಲಿ ಆಗುತ್ತಿದೆ. ತುರ್ತಾಗಿ 25 ಲಕ್ಷ ಡೋಸ್ ಲಸಿಕೆ ವಿತರಿಸುವಂತೆ ಕೇಂದ್ರಕ್ಕೆ ಮನವಿ ಮಾಡಿಕೊಂಡಿದ್ದೇವೆ. ಇದರಿಂದ ಮುಂದಿನ 10 ದಿನ ಲಸಿಕೆ ಕಾರ್ಯಕ್ರಮ ಮುಂದುವರಿಯಲಿದೆ ಎಂದು ಕಿಶೋರ್ ದಾಸ್ ಮಾಹಿತಿ ನೀಡಿದ್ದಾರೆ.
ಈ ಮೊದಲು 15 ಲಕ್ಷ ವ್ಯಾಕ್ಸಿನ್ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ಆದ್ರೆ ಕೇಂದ್ರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಓಡಿಶಾ ಸರ್ಕಾರ ಹೇಳಿದೆ.
ಲಸಿಕೆ ಕೊರತೆ ಹಿನ್ನೆಲೆ ಮೊದಲಿಗೆ 400 ಕೇಂದ್ರಗಳನ್ನ ಮುಚ್ಚಲಾಗಿತ್ತು. ಇಂದು ಈ ಸಂಖ್ಯೆ 700ಕ್ಕೇರಿಕೆಯಾಗಿದೆ. ಬುಧವಾರ 2 ಲಕ್ಷ ಜನರಿಗೆ ಲಸಿಕೆ ನೀಡುವ ಗುರಿ ಇಟ್ಟುಕೊಳ್ಳಲಾಗಿತ್ತು. ಲಸಿಕೆ ಲಭ್ಯವಿಲ್ಲದ ಹಿನ್ನೆಲೆ 1.10 ಲಕ್ಷ ಜನರಿಗೆ ವ್ಯಾಕ್ಸಿನ್ ನೀಡಿದ್ದೇವೆ ಎಂದು ಓಡಿಶಾದ ವ್ಯಾಕ್ಸಿನೇಶನ್ ಇನ್‍ಚಾರ್ಜ್ ಹೇಳಿದ್ದಾರೆ.