ಮುಂಬೈ: ಕಳೆದ ವರ್ಷ ಕೋವಿಡ್-19 ಸಂಕಷ್ಟದ ಸಮಯದಲ್ಲಿ ಬಾಲಿವುಡ್ ನಟ ಸೋನುಸೂದ್ ಅನೇಕ ಮಂದಿಗೆ ಸಹಾಯ ಮಾಡಿದ್ದರು. ಇದೀಗ ಕೊರೊನಾ ಎರಡನೇ ಅಲೆ ಮೂಲಕ ತನ್ನ ಆರ್ಭಟ ಆರಂಭಿಸಿದ್ದು, ಈ ವೇಳೆ ಕೂಡ ಸೋನುಸೂದ್ ಜನರಿಗೆ ಸಹಾಯ ಮಾಡುವ ಕಾರ್ಯವನ್ನು ಮುಂದುವರಿಸಿದ್ದಾರೆ. ಇತ್ತೀಚೆಗೆ ನಟ ಸೋನು ಸೂದ್ ಮನೆಯ ಮುಂದೆ ನೆರವಿನ ಅಂಗಲಾಚಿ ಬಂದಿದ್ದ ಜನರೊಂದಿಗೆ ನಟ ಸೋನು ಸೂದ್ ಮಾತನಾಡುತ್ತಿರುವ ವೀಡಿಯೋವೊಂದು ವೈರಲ್ ಆಗುತ್ತಿದೆ.
ಈ ವೀಡಿಯೋವನ್ನು ಭಯಾನಿ ಎಂಬವರು ಹಂಚಿಕೊಂಡಿದ್ದು, ಸಹಾಯ ಕೇಳಿಕೊಂಡು ಬಂದಿದ್ದ ಜನರೊಂದಿಗೆ ನಟ ಸೋನು ಸೂದ್ ಸಂಭಾಷಣೆ ನಡೆಸುತ್ತಿರುವುದನ್ನು ಕಾಣಬಹುದಾಗಿದೆ.
ವೀಡಿಯೋ ಜೊತೆ “ಜನರು ಸಹಾಯಕ್ಕಾಗಿ ಸೋನು ಸೂದ್ ಅವರ ನಿವಾಸದ ಹೊರಗೆ ಸೇರಿದ್ದಾರೆ. ಈ ದೇಶದಲ್ಲಿ ಸದ್ಯ ಜನರು ನಂಬಿರುವ ಏಕೈಕ ವ್ಯಕ್ತಿ ಅಂದರೆ ಅದು ಸೋನು ಸೂದ್. ಅವರು ಇತರ ಸಂಸ್ಥೆಗಳಿಗಿಂತ ವೇಗವಾಗಿ ಸಹಾಯ ಮಾಡುತ್ತಿದ್ದಾರೆ. ಜನರು ತಮ್ಮ ಅಗತ್ಯತೆಗಳನ್ನು ಕೇಳುತ್ತಿದ್ದಾಗ ಎಂದಿಗೂ ಉತ್ತರಿಸದೇ ಹೋಗದ ಏಕೈಕ ವ್ಯಕ್ತಿ ಎಂದರೆ ಸೋನು ಸೂದ್‍ರವರಾಗಿದ್ದಾರೆ. ಇಂತಹ ಭೀಕರ ಸಾಂಕ್ರಾಮಿಕ ರೋಗದ ಪರಿಸ್ಥಿಯಲ್ಲಿಯೂ ಜನರ ಮಧ್ಯೆ ನಿಂತಿದ್ದಾರೆ ಎಂದು ಸೋನು ಸೂದ್ ಅಭಿಮಾನಿ ಕ್ಯಾಪ್ಷನ್ ಹಾಕಿಕೊಂಡಿದ್ದಾರೆ.
View this post on Instagram
ದೇಶಾದ್ಯಂತ ಸೋನು ಸೂದ್ ಜನರಿಗೆ ಸಹಾಯ ಮಾಡುತ್ತಿದ್ದಾರೆ. ಇತ್ತೀಚೆಗೆ ಸೋನು ಸೂದ್ ಹಾಗೂ ಅವರ ಸ್ವಯಂ ಸೇವಕರ ತಂಡ ಬೆಂಗಳೂರು ನಗರದ ಆಸ್ಪತ್ರೆಗೆ 16ಕ್ಕೂ ಹೆಚ್ಚು ಆಕ್ಸಿಜನ್ ಸಿಲಿಂಡರ್‍ಗಳನ್ನು ಒದಗಿಸಿ, 20ಕ್ಕೂ ಹೆಚ್ಚು ಕೋವಿಡ್ ಸೋಂಕಿತರ ಪ್ರಾಣ ಉಳಿಸಿದ್ದಾರೆ.