ಬೆಳಗಾವಿ: ನೀವು ಧೈರ್ಯವಂತ, ಬಂಡೆ ಎಲ್ಲವನ್ನೂ ಎದುರಿಸುವವರು ಇನ್ನೂ ಸಿಬಿಐ ಎದುರಿಸೋಕ್ಕಾಗಲ್ವಾ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ಪ್ರಶ್ನೆ ಮಾಡಿದ್ದಾರೆ.
ಇಂದು ಬೆಳಗಾವಿಯಲ್ಲಿ ಡಿಕೆಶಿ ಮನೆ ಮೇಲೆ ಸಿಬಿಐ ದಾಳಿ ರಾಜಕೀಯ ಪ್ರೇರಿತವೆಂಬ ಆರೋಪ ವಿಚಾರವಾಗಿ ಮಾತನಾಡಿದ ಅವರು, ಸಿಬಿಐ ಸ್ವತಂತ್ರ ಸಂಸ್ಥೆ, ಕಾಂಗ್ರೆಸ್ ಕಾಲಘಟ್ಟದಲ್ಲಿ ನಿರ್ಮಾಣ ಆಗಿರೋದು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಬಹಳಷ್ಟು ಜನರ ಮೇಲೆ ಸಿಬಿಐ ರೇಡ್ ಆಗಿದೆ ಎಂದರು.
ಲಾಲೂಪ್ರಸಾದ್, ಜಯಲಲಿತಾರಂತ ಘಟಾನುಘಟಿ ನಾಯಕರ ಮನೆ ಮೇಲೆ ಸಿಬಿಐ ದಾಳಿಯಾಗಿದೆ. ಇದನ್ನು ಕಾಂಗ್ರೆಸ್ ರಾಜಕಾರಣ ಮಾಡಿ ಸಿಬಿಐ ದಾಳಿ ಮಾಡಿಸಿದ್ದಾ? ಕಾಂಗ್ರೆಸ್ ಅದನ್ನೆಲ್ಲಾ ರಾಜಕೀಯ ದ್ವೇಷಕ್ಕಾಗಿಯೇ ಮಾಡಿಸಿತ್ತಾ. ಕಾಂಗ್ರೆಸ್ ಸಿಬಿಐನ್ನು ದಾಳವಾಗಿ ಮಾಡಿಕೊಂಡು ಆಟವಾಡಿಸಿತ್ತಾ? ಅವರೇ ಮಾಡಿಸಿದರೆ ಇದು ಹಾಗೇ ಅಂತಾ ತಿಳಿದುಕೊಳ್ಳೋಣ ಎಂದು ಕಾಂಗ್ರೆಸ್ಸಿಗೆ ಟಾಂಗ್ ನೀಡಿದರು.
ಡಿಕೆಶಿ ಮನೆ ಮೇಲೆ ಸಿಬಿಐ ದಾಳಿಯಾಗಿದೆ, ಐಟಿ ತನಿಖೆಯಾಗಿದೆ. ನಿಮಗೇಕೆ ಭಯ ಬೇಕು? ಯಾಕೆ ಜನ ಸೇರಿಸಬೇಕು. ಜೈಲಿಂದ ಬರುವಾಗ ಮೆರವಣಿಗೆ, ಜೈಲಿಗೆ ಹೋಗುವಾಗ ಮೆರವಣಿಗೆ. ನೀವು ಸರಿ ಇದ್ದರೆ ಕಾನೂನು ಹೋರಾಟ ಮಾಡಿ. ಕಾನೂನಾತ್ಮಕ ಹೋರಾಟ ಮಾಡಿ ಪರಿಶುದ್ಧರಾಗಿ ಹೊರ ಬನ್ನಿ. ಕಾನೂನಿಗೆ ಹೆದರೋದು ಏಕೆ ನೀವು ಧೈರ್ಯವಂತ, ಬಂಡೆ. ಎಲ್ಲರನ್ನೂ ಎದುರಿಸೋರು ಸಿಬಿಐ ಎದುರಿಸಕ್ಕೆ ಆಗಲ್ವಾ ಎಂದು ಡಿಕೆಶಿಗೆ ಪ್ರಶ್ನೆ ಮಾಡಿದ್ದಾರೆ.