ನವದೆಹಲಿ: ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳ ಪರೀಕ್ಷೆ ಗೊಂದಲ ಬಗೆಹರಿದ ಬೆನ್ನಲ್ಲೇ ನೀಟ್ ಮತ್ತು ಜೆಇಇ ಪರೀಕ್ಷೆಗಳನ್ನು ನಡೆಸಲು ಮುಂದಾಗಿರುವ ಕೇಂದ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿ ಆರು ರಾಜ್ಯ ಸರ್ಕಾರಗಳು ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿದೆ.
ಕೊರೊನಾ ಸಂಕಷ್ಟ ಕಾಲದಲ್ಲಿ ಪರೀಕ್ಷೆಗಳು ಬೇಡ ಎಂದಿರುವ ಪಶ್ಚಿಮ ಬಂಗಾಳ, ಜಾರ್ಖಂಡ್, ಚತ್ತೀಸ್‍ಗಢ, ಮಹಾರಾಷ್ಟ್ರ, ಪಂಜಾಬ್ ಹಾಗೂ ರಾಜಸ್ಥಾನ ಸರ್ಕಾರಗಳು ಸುಪ್ರೀಂ ಕೋರ್ಟಿನ ಆಗಸ್ಟ್ 17ರ ಆದೇಶವನ್ನು ಪ್ರಶ್ನಿಸಿವೆ.
ಸೆಪ್ಟೆಂಬರ್ 1ರಿಂದ 6ವರೆಗೆ ಎಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶ ಕಲ್ಪಿಸುವ ಜೆಇಇ ಹಾಗೂ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶಕ್ಕೆ ನಡೆಸಲಾಗುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ನೀಟ್‍ಗೆ ಸೆಪ್ಟೆಂಬರ್ 16ರಂದು ದಿನಾಂಕ ನಿಗಧಿ ಮಾಡಲಾಗಿದೆ. ಸುಮಾರು 28 ಲಕ್ಷ ಮಂದಿ ವಿದ್ಯಾರ್ಥಿಗಳು ಈ ಪರೀಕ್ಷೆ ಬರೆಯುತ್ತಿದ್ದಾರೆ. ಇದರಿಂದ ಕೊರೊನಾದಿಂದ ಸಂಕಷ್ಟ ಸೃಷ್ಟಿಯಾಗಬಹುದು ಸೋಂಕು ಹರಡಲು ಮತ್ತೊಂದು ವೇದಿಕೆಯಾಗಬಹುದು ಎಂದು ರಾಜ್ಯ ಸರ್ಕಾರಗಳು ಆರೋಪಿಸಿ ಪರೀಕ್ಷೆ ಮುಂದೂಡಲು ಮನವಿ ಮಾಡಿದೆ.
ಈ ಹಿಂದೆ ಪರೀಕ್ಷೆ ಸಂಬಂಧ ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಕಾಲೇಜುಗಳು ಅರ್ಜಿ ಸಲ್ಲಿಸಿದ್ದ ವೇಳೆ ವಿದ್ಯಾರ್ಥಿಗಳು ಹಿತ ದೃಷ್ಟಿಯಿಂದ ಪರೀಕ್ಷೆ ಮುಖ್ಯ, ಪರೀಕ್ಷೆಗೆ ತಡೆ ಇಲ್ಲ ಎಂದು ಆದೇಶ ನೀಡಿತ್ತು. ಈ ಆದೇಶವನ್ನು ಪಶ್ನಿಸಿ ಈಗ ರಾಜ್ಯ ಸರ್ಕಾರಗಳು ಅರ್ಜಿ ಸಲ್ಲಿಸಿವೆ.