ಬೆಂಗಳೂರು: ಸಿಎಂ ರೇಸ್‍ನಲ್ಲಿದ್ದ ಬೆಲ್ಲದ್, ನಿರಾಣಿ ಪೈಕಿ ಒಬ್ಬರನ್ನು ಹೈಕಮಾಂಡ್ ಅಂತಿಮಗೊಳಿಸಲಿದೆ ಎಂಬ ಮಾತು ಕೇಳಿ ಬಂದಿತ್ತು. ಆದರೆ ಕ್ಲೈಮ್ಯಾಕ್ಸ್ ನಲ್ಲಿ ಇವರಿಬ್ಬರಿಗೂ ಸಿಎಂ ಪಟ್ಟ ತಪ್ಪಿದ್ದು ಲಾಬಿ ಮಾಡದ ಬೊಮ್ಮಾಯಿ ಅವರಿಗೆ ಒಲಿದಿದೆ.
ಮುಖ್ಯಮಂತ್ರಿ ರೇಸ್‍ನಲ್ಲಿದ್ದ ನಿರಾಣಿ ಮತ್ತು ಬೆಲ್ಲದ್ ದೆಹಲಿಗೆ ಹೋಗಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿದ್ದರು. ಅಷ್ಟೇ ಅಲ್ಲದೇ ಇವರಿಬ್ಬರೂ ವಾರಣಾಸಿಗೆ ತೆರಳಿ ಗಂಗೆಯಲ್ಲಿ ಸ್ನಾನ ಮಾಡಿ ಕಾಶಿ ವಿಶ್ವನಾಥನ ದರ್ಶನ ಮಾಡಿದ್ದರು. ಹೀಗಾಗಿ ನಿರಾಣಿ ಮತ್ತು ಬೆಲ್ಲದ್ ಮಧ್ಯೆ ಒಬ್ಬರಿಗೆ ಪಟ್ಟ ಸಿಗಬಹುದು ಎಂಬ ಮಾತು ಬಿಜೆಪಿ ಮೂಲಗಳಿಂದ ತಿಳಿದುಬಂದಿತ್ತು.
ನಿರಾಣಿಗೆ ಸಿಎಂ ಕುರ್ಚಿ ಕೈತಪ್ಪಿದ್ದೇಗೆ?
ನಿರಾಣಿಗೆ ಮಾಸ್ ಇಮೇಜ್ ಇಲ್ಲ. ಇದರ ಜೊತೆ ಯಡಿಯೂರಪ್ಪ ಕೃಪಾಕಟಾಕ್ಷ ಸಿಗಲಿಲ್ಲ. ಪಕ್ಷದಲ್ಲಿನ ಶೀತಲ ಸಮರದಿಂದ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಬಗ್ಗೆ ಹೈಕಮಾಂಡ್‍ಗೆ ಅನುಮಾನ ಬಂದಿದೆ. ಇದರ ಜೊತೆ ಕೇಳಿ ಬಂದ ಒಂದಿಷ್ಟು ಆರೋಪಗಳಿಂದ ನಿರಾಣಿಗೆ ಹಿನ್ನಡೆಯಾಗಿದೆ. ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಬೆಂಬಲ ಸಿಗದ ಕಾರಣ ಹೈಕಮಾಂಡ್ ಬೊಮ್ಮಾಯಿಗೆ ಮಣೆ ಹಾಕಿದೆ. ಇದನ್ನೂ ಓದಿ : ಲಾಬಿ ಮಾಡದ ಬೊಮ್ಮಾಯಿಗೆ ಒಲಿಯಿತು ಅದೃಷ್ಟ
ಬೆಲ್ಲದ್‍ಗೆ ಸಿಎಂ ಕುರ್ಚಿ ಕೈತಪ್ಪಿದ್ದೇಗೆ?
ಅರವಿಂದ್ ಬೆಲ್ಲದ್ ಅವರಿಗೆ ಮಾಸ್ ಇಮೇಜ್ ಇಲ್ಲ. ಬೆಲ್ಲದ್ ಪರವಾಗಿ ಬಿಎಸ್‍ವೈ ಆಸಕ್ತಿ ತೋರಿಸಿರಲಿಲ್ಲ. ಕ್ಲೀನ್ ಇಮೇಜ್ ಇದ್ದರೂ ಬೆಲ್ಲದ್ ಅವರಿಗೆ ಅನುಭವದ ಕೊರತೆಯಿದೆ. ಹಿರಿಯರನ್ನು ಹೇಗೆ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೆ ಎಂಬ ಪ್ರಶ್ನೆ ಎದ್ದಿತ್ತು. ಅಷ್ಟೇ ಅಲ್ಲದೇ ಇನ್ನು ಎರಡು ವರ್ಷದಲ್ಲಿ ಚುನಾವಣೆ ನಡೆಯಲಿದೆ. ಹೀಗಾಗಿ ಸದ್ಯಕ್ಕೆ ಪ್ರಯೋಗ ಮಾಡುವುದು ಬೇಡ. ಮುಂದಿನ ದಿನಗಳಲ್ಲಿ ಅವಕಾಶ ಕೊಡಬಹುದು ಎಂಬ ಆಲೋಚನೆ ಮಾಡಿದ ಹೈಕಮಾಂಡ್ ಆಡಳಿತ ಅನುಭವ ಇರುವ ಬೊಮ್ಮಾಯಿ ಅವರನ್ನೇ ಅಂತಿಮಗೊಳಿಸಿದೆ.
ಮುಂದೇನು?
ಬೆಲ್ಲದ್, ನಿರಾಣಿಗೆ ಸಿಎಂ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಡಿಸಿಎಂ ಸ್ಥಾನಕ್ಕೆ ಪಟ್ಟು ಹಿಡೀತಾರಾ ಎಂಬ ಪ್ರಶ್ನೆ ಎದ್ದಿದೆ. ಇಬ್ಬರೂ ಲಿಂಗಾಯತ ಸಮುದಾಯದವರಾದ ಕಾರಣ ಇಬ್ಬರನ್ನೂ ಡಿಸಿಎಂ ಮಾಡುವುದು ಅನುಮಾನ. ಹೀಗಾಗಿ ಹಠ ಬಿಟ್ಟು ಬೊಮ್ಮಾಯಿ ಸಂಪುಟದಲ್ಲಿ ಸಚಿವರಾಗ್ತಾರಾ? ಇಲ್ಲ ಉನ್ನತ ಸ್ಥಾನಕ್ಕಾಗಿ ಲಾಬಿ ಮಾಡುತ್ತಾರಾ ಎಂಬ ಪ್ರಶ್ನೆಗಳಿಂಂದ ಅರವಿಂದ್ ಬೆಲ್ಲದ್, ಮುರುಗೇಶ್ ನಿರಾಣ ಅವರ ಮುಂದಿನ ನಡೆದ ಕುತೂಹಲ ಕೆರಳಿಸಿದೆ.