– ಸಿನ್ಮಾ ಪ್ರಚಾರಕ್ಕೆ ಸಾವಿರಾರು ಜನರನ್ನ ಸೇರಿಸಬೇಡಿ
– ಸ್ಟಾರ್ ನಟರಿಗೂ ಸಾಮಾಜಿಕ ಜವಾಬ್ದಾರಿ ಇದೆ
ಬೆಂಗಳೂರು: ನಿಯಮಗಳನ್ನ ಪಾಲಿಸದಿದ್ರೆ ಕೊರೊನಾ ಸ್ಫೋಟ ನಿಶ್ವಿತ ಎಂದು ಆರೋಗ್ಯ ಸಚಿವ ಸುಧಾಕರ್ ಆತಂಕ ವ್ಯಕ್ತಪಡಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಯಾವುದೇ ಧಾರ್ಮಿಕ ಜಾತ್ರೆ, ಸಮಾರಂಭ, ರಾಜಕೀಯ ಕಾರ್ಯಕ್ರಮಗಳಿಗೆ ಒಂದು ತಿಂಗಳು ಕಡಿವಾಣ ಹಾಕಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳು ಕಷ್ಟವಾಗಲಿವೆ. ಪೂಜ್ಯ ಮಠಮಾನ್ಯಗಳವರು, ದೇವಸ್ಥಾನಗಳ ಪ್ರಮುಖರು ತಮ್ಮ ಸಮುದಾಯಕ್ಕೆ ಸಂದೇಶ ನೀಡಬೇಕು. ಜಾತ್ರೆ ಸಮಾರಂಭಗಳಿಗೆ ಜನರು ಬರದಂತೆ ಮನವಿ ಮಾಡಬೇಕು. ಕೆಲ ಚಲನಚಿತ್ರ ತಾರೆಯರು ಸಿನಿಮಾ ಪ್ರಚಾರಕ್ಕಾಗಿ ಸಾವಿರಾರು ಜನರನ್ನ ಸೇರಿಸಿರೋದನ್ನ ಗಮನಿಸಿದ್ದೇನೆ. ಸ್ಟಾರ್ ನಟರಿಗೂ ಸಾಮಾಜಿಕ ಜವಾಬ್ದಾರಿ ಇದೆ. ನೀವು ಮಾಸ್ಕ್ ಧರಿಸಿ, ನಿಮ್ಮ ಅಭಿಮಾನಿಗಳಿಗೂ ಹೇಳಿ ಎಂದು ಚಲನಚಿತ್ರ ತಾರೆಯರಿಗೆ ಸುಧಾಕರ್ ಮನವಿ ಮಾಡಿಕೊಂಡರು.
Advertisement
Advertisement
ನಾವು ಮತ್ತೆ 12 ಲಕ್ಷ ಲಸಿಕೆ ಪಡೆಯಲಿದ್ದೇವೆ. ಆರಂಭದಲ್ಲಿ ಇದ್ದ ಸಣ್ಣಪುಟ್ಟ ಸಮಸ್ಯೆಗಳು ಕಡಿಮೆಯಾಗಿದೆ. ಬೇರೆ ಸಮಸ್ಯೆಗಳಿದ್ದರೂ ಸರಿಮಾಡುತ್ತೇವೆ. ಗಡಿಯಲ್ಲಿ ಬಿಗಿಯಾದ ಕ್ರಮ ಕೈಗೊಂಡಿದ್ದೇವೆ. 45 ವರ್ಷ ಮೇಲ್ಪಟ್ಟವರು ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು. ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಿ ಎಂದು ವಿನಂತಿ ಮಾಡುತ್ತೇನೆ. ಎಲ್ಲಾ ಸಮಾರಂಭಗಳಿಗೆ ಕಡಿವಾಣ ಹಾಕಬೇಕಿದೆ ಎಂದರು.