ಡೆಹರಾಡೂನ್: ನಿಮ್ಮ ಹೆಸರು ನೀರಜ್ ಅಥವಾ ವಂದನಾ ಆಗಿದ್ರೆ ಹರಿದ್ವಾರದ ಚಂಡಿದೇವಿ ದೇವಸ್ಥಾನಕ್ಕೆ ತೆರಳುವ ರೋಪ್ ವೇನಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ ಮತ್ತು ಹಾಕಿಯಲ್ಲಿ ಹ್ಯಾಟ್ರಿಕ್ ಗೋಲ್ ಮಾಡಿದ ವಂದನಾ ಕಟಾರಿಯಾ ಅವರಿಗೆ ರೋಪ್ ವೇ ನಿರ್ವಹಣಾ ಕಂಪನಿ ವಿಶೇಷವಾಗಿ ಗೌರವ ಸಲ್ಲಿಸಿದೆ.
ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದ ಕ್ರೀಡಾಪಟುಗಳಿಗೆ ವಿವಿಧ ರೀತಿಯಲ್ಲಿ ಗೌರವ ಸಲ್ಲಿಕೆ ಮಾಡಲಾಗುತ್ತಿದೆ. ಆಯಾ ರಾಜ್ಯ ಸರ್ಕಾರಗಳು ವಿಜೇತರ ಜೊತೆ ಒಲಿಂಪಿಕ್ಸ್ ನಲ್ಲಿ ಭಾಗಿಯಾದ ಆಟಗಾರರಿಗೂ ಬಹುಮಾನ ಘೋಷಿಸಿವೆ. ಚಂಡಿದೇವಿ ದೇವಿಯ ರೋಪ್ ವೇ ನಿರ್ವಹಣೆಯ ಉಷಾ ಬ್ರೆಕೋ ಕಂಪನಿ ನೀರಜ್ ಮತ್ತು ವಂದನಾ ಹೆಸರಿನ ಜನರಿಗೆ ಉಚಿತ ಸೇವೆನೀಡುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದೆ.
ಆಗಸ್ಟ್ 11ರಿಂದ ಆಗಸ್ಟ್ 20ರವರೆಗೆ ನೀರಜ್ ಮತ್ತು ವಂದನಾ ಹೆಸರಿನವರು ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಪ್ರಯಾಣಿಕರು ಸಿಬ್ಬಂದಿಗೆ ತಮ್ಮ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತೋರಿಸಬೇಕು ಎಂದು ಉಷಾ ಬ್ರೆಕೊ ಕಂಪನಿಯ ರೀಜನಲ್ ಹೆಡ್ ಮನೋಜ್ ಡೋಬಾಲ್ ಹೇಳಿದ್ದಾರೆ. ಇದನ್ನೂ ಓದಿ: 200 ರಿಂದ 4ನೇ ಸ್ಥಾನಕ್ಕೆ ಜಿಗಿತ – ಕೊನೆ ಕ್ಷಣದಲ್ಲಿ ಅದಿತಿಗೆ ತಪ್ಪಿತು ಪದಕ
ಟೋಕಿಯೋ ಒಲಿಂಪಿಕ್ಸ್ ನಲ್ಲಿ ಇತಿಹಾಸ ಬರೆದ ಪದಕ ವೀರರು ಸೋಮವಾರ ಭಾರತಕ್ಕೆ ಹಿಂದಿರುಗಿದ್ದಾರೆ. ಎಲ್ಲ ಕ್ರೀಡಾಳುಗಳಿಗೆ ದೆಹಲಿಯ ಅಶೋಕ ಹೋಟೆಲ್ ನಲ್ಲಿ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಸನ್ಮಾನಿಸಿದರು. ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತ ಒಟ್ಟು ಏಳು ಪದಕಗಳನ್ನು ಗೆದ್ದಿದೆ. ಇದನ್ನೂ ಓದಿ: ನಾನು ಸಿಂಗಲ್, ಆಟದ ಮೇಲೆ ಮಾತ್ರ ನನ್ನ ಗಮನ: ನೀರಜ್ ಚೋಪ್ರಾ