ಬೆಂಗಳೂರು: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ವಿರುದ್ಧ ಕನ್ನಡ ಹೋರಾಟಗಾರರು ಸಿಡಿದ್ದೇದಿದ್ದಾರೆ. ಉದ್ದವ್ ಠಾಕ್ರೆ ಉದ್ದಟತನ ಹಾಗೂ ಯಡಿಯೂರಪ್ಪನವರ ನಿಷ್ಕ್ರಿಯತೆ ವಿರೋಧಿಸಿ ಇಂದು ಕರಾಳ ದಿನಾಚರಣೆ ಆಚರಿಸಲಾಯಿತು.
ನಗರದ ಮೈಸೂರು ಬ್ಯಾಂಕ್ ಸರ್ಕಲ್ ಗೆ ಕಪ್ಪು ಬಟ್ಟೆ ಧರಿಸಿ ಆಗಮಿಸಿದ ಕನ್ನಡ ಒಕ್ಕೂಟದ ಹೋರಾಟಗಾರರು ಕ್ಯಾತೆ ತೆಗೆದ ಮಹಾರಾಷ್ಟ್ರ ಸರ್ಕಾರದ ವಿರುದ್ದ ತೊಡೆ ತಟ್ಟಿನಿಂತರು. ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮೈಸೂರು ಬ್ಯಾಂಕ್ ಸರ್ಕಲ್ ನ ರಸ್ತೆಯಲ್ಲಿ ಕುಳಿತು ಪ್ರತಿಭಟಿಸಿದರು. ವಾಹನಗಳನ್ನು ತಡೆದರು. ಪ್ರತಿಭಟನೆಯಲ್ಲಿ ಕನ್ನಡ ಹೋರಾಟಗಾರರಾದ ವಾಟಾಳ್ ನಾಗರಾಜ್, ಸಾರಾ ಗೋವಿಂದ್, ಶಿವರಾಮೇಗೌಡ ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ್, ಶಿವಸೇನೆ ವಿರುದ್ದ ಯುದ್ದ ಇವತ್ತಿಗೆ ಮುಗಿಯುವುದಿಲ್ಲ. ಎಲ್ಲಾ ಕನ್ನಡ ಪರ ಸಂಘಟನೆಗಳು ಯುದ್ದ ಘೋಷಿಸಿವೆ. ನಾಳೆ 11.30ಕ್ಕೆ ಬೆಳಗಾವಿಯ ಸುವರ್ಣ ಸೌಧದ ಮೂಲಕ ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆ ಮುಂದೆ ಹೋರಾಡುತ್ತೇವೆ. ನಾಳೆ ಮಹಾರಾಷ್ಟ್ರ ಗಡಿಯನ್ನು ದಾಟುತ್ತೇವೆ. ಜೈಲಿಗೆ ಹಾಕುತ್ತಿರಾ ಹಾಕಿ, ಹೆದರುವುದಿಲ್ಲ ಎಂದರು.
ಇದೇ 29ರಂದು ಚಾಮರಾಜನಗರ ಗಡಿ ಬಂದ್ ಮಾಡುತ್ತೇವೆ. 30ನೇ ತಾರೀಖು ರಾಜ್ಯ ರೈಲು ಬಂದ್ ಹಾಗೂ ಫೆಬ್ರವರಿ 13 ಇಡೀ ಕರ್ನಾಟಕದಾದ್ಯಂತ ಕರಾಳ ದಿನಾಚರಣೆ ಆಚರಿಸತ್ತೇವೆ. ಆ ದಿನ ರಾಜ್ಯಾದ್ಯಂತ ಎಲ್ಲಾ ಕಾರು, ಬಸ್ ತಡೆಯಿರಿ ಎಂದು ಕನ್ನಡ ಹೋರಾಟಗಾರರಿಗೆ ಕರೆ ನೀಡಿದರು. ಜೊತೆಗೆ ಶಿವಮೊಗ್ಗದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಇದೊಂದು ಸರ್ಕಾರದ ದುರಂತ, ಯಡಿಯೂರಪ್ಪ ಹಾಗೂ ಈಶ್ವರಪ್ಪ ಅವರದು ಬರೀ ನಾಟಕ. ಇಬ್ಬರೂ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.
ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದ್ ಮಾತನಾಡಿ, ನಾಳೆಯ ಬೆಳಗಾವಿ ಹೋರಾಟಕ್ಕೆ ಸರ್ಕಾರ ಬೆಂಬಲಕೊಡಲಿ ಎಂದು ಹೇಳಿದರು. ಕೆಲ ಹೊತ್ತಿನ ನಂತರ ಎಲ್ಲಾ ಕನ್ನಡ ಪರ ಹೋರಾಟಗಾರರನ್ನು ಪೋಲಿಸರು ವಶಕ್ಕೆ ಪಡೆದರು.