ಬೆಂಗಳೂರು: ನಾಳೆ ದೆಹಲಿಗೆ ತೆರಳಲು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪ್ಲಾನ್ ಮಾಡಿಕೊಂಡಿದ್ದು, ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಭೇಟಿಗೆ ಸಮಯ ಕೇಳಿದ್ದಾರೆ.
ಸಿಎಂ ಅವರು ಭೇಟಿಗೆ ಸಮಯ ಕೇಳಿರುವ ಹಿನ್ನೆಲೆಯಲ್ಲಿ ಇಂದು ಸಮಯ ನಿಗದಿಯ ಸಂದೇಶ ಹೊರಬೀಳುವ ಸಾಧ್ಯತೆಗಳಿವೆ. ದೆಹಲಿಗೆ ಪ್ರಯಾಣ ಬೆಳೆಸಲು ಅನುಮತಿ ಸಿಕ್ಕರೆ ಹೈಕಮಾಂಡ್ ಬಿಎಸ್‍ವೈಗೆ ಗ್ರೀನ್ ಸಿಗ್ನಲ್ ನೀಡುತ್ತಾ, ಇದು ಆಗಸ್ಟ್ ಕ್ರಾಂತಿಯ ಮುನ್ಸೂಚನೆಯಾ ಎಂಬ ಪ್ರಶ್ನೆ ಮೂಡಿದೆ.
ಇದೇ ವರ್ಷ ಜನವರಿ 10 ರಂದು ಯಡಿಯೂರಪ್ಪ ಅವರು ದೆಹಲಿಗೆ ಹೋಗಿದ್ದರು. ಇದೀಗ ಮತ್ತೆ ಆರು ತಿಂಗಳ ಬಳಿಕ ದೆಹಲಿ ಭೇಟಿಗೆ ಸಿಎಂ ಮುಂದಾಗಿದ್ದು, ಈ ಗಾಗಲೇ ಮೋದಿ ಭೇಟಿಗೆ ಅವಕಾಶ ಕೇಳಿದ್ದಾರೆ. ಭೇಟಿಗೆ ಸಮಯ ಸಿಕ್ಕರೇ ನಾಳೆ ಅಥವಾ ನಾಡಿದ್ದು ಯಡಿಯೂರಪ್ಪ ದೆಹಲಿಗೆ ತೆರಳುವ ಸಾಧ್ಯತೆಗಳಿವೆ. ಇದನ್ನೂ ಓದಿ: ಕೊಡಗಿನಲ್ಲಿ ಭಾರೀ ಮಳೆ – ಮತ್ತೆ ರಸ್ತೆ ಕುಸಿತ, ಈ ವಾರ ಹಾರಂಗಿ ಭರ್ತಿ ಸಾಧ್ಯತೆ
ಭೇಟಿ ವೇಳೆ ಸಿಎಂ ಅವರು ರಾಜ್ಯದ ಅಭಿವೃದ್ಧಿ, ವಿವಿಧ ಯೋಜನೆಗಳಿಗೆ ಒಪ್ಪಿಗೆ, ಹೆಚ್ಚುವರಿ ಲಸಿಕೆ ಬೇಡಿಕೆ, ಬಾಕಿ ಅನುದಾನ ಸಂಬಂಧ ಚರ್ಚೆ ನಡೆಸಲಿದ್ದಾರೆ. ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬಗ್ಗೆಯೂ ಚರ್ಚೆ ಹಾಗೂ ನಾಯಕತ್ವ ಬದಲಾವಣೆ ಗೊಂದಲಕ್ಕೆ ತೆರೆ ಎಳೆಯುವಂತೆ ಮನವಿ ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ. ಜುಲೈ 27ಕ್ಕೆ ಬಿಎಸ್‍ವೈ ಅಧಿಕಾರಕ್ಕೆ ಬಂದು ಭರ್ತಿ 2 ವರ್ಷವಾಗುತ್ತದೆ.