ಬೆಂಗಳೂರು: ಸೋಮವಾರ ಕರ್ನಾಟಕ ಬಂದ್ ಯಾವ ಸ್ವರೂಪ ಬೇಕಾದ್ರು ಪಡೆಯಬಹುದು ಎಂದು ಕರವೇ ಅಧ್ಯಕ್ಷ ನಾರಾಯಣ ಗೌಡ ಎಚ್ಚರಿಕೆ ನೀಡಿದ್ದಾರೆ.
ಈ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಸೋಮವಾರದ ಬಂದ್ ಗೆ ಕರವೇ ಸಂಪೂರ್ಣ ಬೆಂಬಲಕ್ಕೆ ನಿಲ್ಲುತ್ತೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕರವೇ ಬಣ ಬಂದ್ ನಲ್ಲಿ ಪಾಲ್ಗೊಳ್ಳುತ್ತೆ. ಸೋಮವಾರದ ಬಂದ್‍ನಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಬೇಕು. ಹಾಗಾಗಿ ಬಂದ್ ಯಾವ ಸ್ವರೂಪ ಬೇಕಾದರೂ ಪಡೆಯಬಹುದು ಎಂದು ಹೇಳಿದ್ದಾರೆ.
ರೈಲು, ವಿಮಾನ, ಹೆದ್ದಾರಿ, ಸಾರಿಗೆ ಓಡಾಟದಲ್ಲಿ ಏನು ಬೇಕಾದ್ರು ಆಗಬಹುದು. ಭೂಸುಧಾರಣಾ, ಎಪಿಎಂಪಿ ಕಾಯ್ದೆ ವಿರುದ್ಧ ಹೋರಾಟ ನಿಲ್ಲಲ್ಲ. ಈ ಎರಡು ಕಾಯ್ದೆಗಳು, ರೈತರಿಗೆ ಮರಣ ಶಾಸನ ಬರೆದಂತೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭಂಡ ಸರ್ಕಾರಗಳು. ರೈತರನ್ನು ಉದ್ದಾರ ಮಾಡ್ತೀವಿ ಅಂತಾರೆ. ಒಳ್ಳೆ ಬೆಲೆ ಸಿಗುತ್ತೆ ಅಂತಿದ್ದಾರೆ ಅದೆಲ್ಲಾ ಸುಳ್ಳು. ರೈತನ ಭೂಮಿಯನ್ನು ಹಣವಂತರು, ನೂರಾರು, ಸಾವಿರಾರು ಎಕರೆ ಜಮೀನು ತಗೋತಾರೆ. ರೈತರು ಅವರ ಅಧೀನರಾಗ್ತಾರೆ ಎಂದು ಸರ್ಕಾರಗಳ ವಿರುದ್ಧ ಕಿಡಿಕಾರಿದ್ರು.
ರೈತರ ಬಗ್ಗೆ ಕಾಳಜಿ ಇರುವ ಎಲ್ಲರೂ ಪ್ರತಿಭಟನೆಯಲ್ಲಿ ಪಾಲ್ಗೊಳ್ತಾರೆ. ಕೊರೊನಾದಿಂದ ಜನ ತುಂಬಾ ಕಷ್ಟಪಟ್ಟಿದ್ದಾರೆ. ಇಂತಹ ಸಮಯದಲ್ಲಿಯೂ ನಾವು ರೈತರ ಪರ ನಿಲ್ಲುತ್ತೇವೆ. ಸೋಮವಾರ ಸಾರ್ವಜನಿಕರಿಗೆ ತೊಂದರೆ ಆಗುತ್ತೆ, ಈ ಮೂಲಕ ಅವರ ಕ್ಷೇಮೆ ಕೇಳ್ತೀನಿ ಅಂದರು.