– ನೆಗೆಟಿವ್ ಇದ್ರೆ ಮಾತ್ರ ಪ್ರವೇಶಕ್ಕೆ ಅವಕಾಶ
– ಕಟ್ಟುನಿಟ್ಟಿನ ನಿಯಮ ಪಾಲನೆ ಜಾರಿಗೆ
ತಿರುವನಂತಪುರಂ: ಈ ವರ್ಷದ ಮಂಡಲಕ್ಕೆ ಶಬರಿಮಲೆ ದೇವಸ್ಥಾನವನ್ನು ತೆರೆಯಲಾಗುತ್ತಿದ್ದು, ಸೋಮವಾರದಿಂದ ಅಯ್ಯಪ್ಪನ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಆದರೆ ಕಟ್ಟುನಿಟ್ಟಿನ ಕೊರನಾ ನಿಯಮಾವಳಿಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.
ಶಬರಿಮಲೆ ಅಯ್ಯಪ್ಪ ದೇವಾಲಯದ ಪ್ರಧಾನ ಅರ್ಚಕ ಎ.ಕೆ.ಸುಧೀರ್ ನಂಬೂಥಿರಿಯವರು ಪ್ರಧಾನ ಅರ್ಚಕ ಕಂದರರು ರಾಜೀವರು ಅವರ ನೇತೃತ್ವದಲ್ಲಿ ಇಂದು ಸಂಜೆ 5 ಗಂಟೆಗೆ ದೇವಸ್ಥಾನದ ಬಾಗಿಲು ತೆರೆಯಲಿದ್ದಾರೆ. ಶಬರಿಮಲೆಯ ಹೊಸ ಪ್ರಧಾನ ಅರ್ಚಕರಾದ ವಿ.ಕೆ.ಜಯರಾಜ್ ಪೊಟ್ಟಿ ಹಾಗೂ ಮಲ್ಲಿಕಾಪುರಂ ಪ್ರಧಾನ ಅರ್ಚಕ ಎಂ.ಎನ್ ರಾಜಿಕುಮಾರ್ ಅವರು ಸಂಜೆ ದೇವಸ್ಥಾನಕ್ಕೆ ಆಗಮಿಸಲಿದ್ದಾರೆ.
Advertisement
Advertisement
ಸೋಮವಾರ ವೃಶ್ಚಿಕದ ಮೊದಲ ದಿನವಾದ್ದರಿಂದ ಹೊಸ ಪ್ರಧಾನ ಅರ್ಚಕರು ದೇವಸ್ಥಾನದ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಿದ್ದಾರೆ. ಸೋಮವಾರ ಬೆಳಗ್ಗೆಯಿಂದ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಆದರೆ ಕೊರೊನಾ ಹಿನ್ನೆಲೆ ಕಟ್ಟುನಿಟ್ಟಿನ ನಿಯಮ ಪಾಲಿಸುವುದು ಕಡ್ಡಾಯವಾಗಿದ್ದು, ಒಂದು ದಿನಕ್ಕೆ ಕೇವಲ 1 ಸಾವಿರ ಭಕ್ತರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ.
Advertisement
ಈ ಕುರಿತು ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್ ಅವರು ಮಾತನಾಡಿ, ಆರಂಭದಲ್ಲಿ 1 ಸಾವಿರ ಭಕ್ತರಿಗೆ ಮಾತ್ರ ಅವಕಾಶ ನೀಡುತ್ತಿದ್ದು, ನಂತರದ ದಿನಗಳಲ್ಲಿ ನಿಧಾನವಾಗಿ ಹೆಚ್ಚು ಭಕ್ತರಿಗೆ ಅವಕಾಶ ನೀಡಲಾಗುವುದು. ಆರಂಭದ ಎರಡು ದಿನಗಳಲ್ಲಿ ದರ್ಶನ ಪಡೆಯದವರು ವರ್ಚುವಲ್ ಕ್ಯೂನಲ್ಲಿ ನೋಂದಾಯಿಸಿಕೊಳ್ಳಬಹದು. ಅವರಿಗೆ ನಂತರದ ದಿನಗಳಲ್ಲಿ ಅವಕಾಶ ನೀಡಲಾಗುವುದು ಎಂದರು.
Advertisement
ಶುಕ್ರವಾರ ಉನ್ನತ ಮಟ್ಟದ ಸಭೆ ನಡೆಸಿದ ಬಳಿಕ ಸಚಿವರು ಈ ನಿರ್ಧಾರ ಕೈಗೊಂಡಿದ್ದಾರೆ. ಸಂಪೂರ್ಣವಾಗಿ ವರ್ಚುವಲ್ ಕ್ಯೂ ರಿಜಿಸ್ಟ್ರೇಶನ್ ವ್ಯವಸ್ಥೆ ಮೂಲಕ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗುವುದು. ಯಾತ್ರಾರ್ಥಿಗಳು ಆ್ಯಂಟಿ ವೈರಸ್ ಮಾಸ್ಕ್, ಸಾಮಾಜಿಕ ಅಂತರ ಕಾಪಾಡುವುದು, 60-65 ವರ್ಷದೊಳಗಿರುವವರು ವೈದ್ಯಕೀಯ ವರದಿ ತರುವುದು ಕಡ್ಡಾಯವಾಗಿದೆ. ಅಲ್ಲದೆ 24 ಗಂಟೆಯೊಳಗಡೆ ಪರೀಕ್ಷೆ ಮಾಡಿಸಿದ ಕೊರೊನಾ ನೆಗೆಟಿವ್ ವರದಿಯನ್ನು ತರುವುದು ಕಡ್ಡಾಯವಾಗಿದೆ.
ಆರೋಗ್ಯ ಇಲಾಖೆ ಕೊರೊನಾ ಟೆಸ್ಟಿಂಗ್ ಕೇಂದ್ರಗಳನ್ನು ಸಹ ತೆರೆಯಲಾಗಿದ್ದು, ತಿರುವನಂತಪುರಂ, ತಿರುವಳ್ಳ, ಚೆಂಗಣ್ಣೂರ್ ಹಾಗೂ ಕೊಟ್ಟಯಂ ರೈಲು ನಿಲ್ದಾಣಗಳಲ್ಲಿ ಆ್ಯಂಟಿಜೆನ್ ಟೆಸ್ಟ್ ಮಾಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಅಲ್ಲದೆ ನಿಲಕ್ಕಲ್ ಹಾಗೂ ಪಂಬಾಗಳಲ್ಲಿ ಕೋವಿಡ್-19 ಟೆಸ್ಟಿಂಗ್ ಕಿಯೋಸ್ಕ್‍ಗಳನ್ನು ಸಹ ಸ್ಥಾಪಿಸಲಾಗುತ್ತಿದೆ. ಪರೀಕ್ಷ ವೇಳೆ ಯಾರಿಗಾದರೂ ಪಾಸಿಟಿವ್ ವರದಿ ಬಂದಲ್ಲಿ, ಅಂತರಾಜ್ಯ ಭಕ್ತರಾಗಿದ್ದರೂ ನೆಗೆಟಿವ್ ವರದಿ ಬರುವ ವರೆಗೆ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ.