ಹುಬ್ಬಳ್ಳಿ: ಅವಳಿ ನಗರದ ಸಾರ್ವಜನಿಕರು ಬಹುದಿನಗಳಿಂದ ಕಾಯುತ್ತಿದ್ದ ಹುಬ್ಬಳ್ಳಿಯಿಂದ ಗೋವಾ ರಾಜ್ಯಕ್ಕೆ ಸಾರಿಗೆ ಬಸ್ಸುಗಳ ಸಂಚಾರವನ್ನು ಶನಿವಾರದಿಂದ ಮತ್ತೆ ಆರಂಭಿಸಲಾಗುತ್ತದೆ.
ಗೋವಾಕ್ಕೆ ತೆರಳುವ ಬಸ್ಸುಗಳು ಗೋಕುಲ ರಸ್ತೆಯಲ್ಲಿರುವ ಹೊಸ ಬಸ್ ನಿಲ್ದಾಣದಿಂದ ಹೊರಡುತ್ತವೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ. ಲಾಕ್‍ಡೌನ್ ಪೂರ್ವದಲ್ಲಿ ಹುಬ್ಬಳ್ಳಿಯಿಂದ ಪ್ರತಿದಿನ ಪಣಜಿಗೆ ಒಂದು ರಾಜಹಂಸ ಮತ್ತು 8 ವೇಗಧೂತ, ವಾಸ್ಕೋಗೆ ಮತ್ತು ಮಡಗಾಂವಗೆ ತಲಾ 1 ಬಸ್ಸು ಸೇರಿ ಒಟ್ಟು 11 ಬಸ್ಸುಗಳು ಗೋವಾ ರಾಜ್ಯಕ್ಕೆ ಸಂಚರಿಸುತ್ತಿದ್ದವು.
ಮೊದಲ ಹಂತದಲ್ಲಿ ಪಣಜಿಗೆ ನಾಲ್ಕು (1 ರಾಜಹಂಸ, 3 ವೇಗಧೂತ) ಹಾಗೂ ವಾಸ್ಕೋ ಮತ್ತು ಮಡಗಾಂವಗೆ ತಲಾ ಒಂದು ಬಸ್ ಸಂಚಾರವನ್ನು ಆರಂಭಿಸಲಾಗಿದೆ.
ಪಣಜಿಗೆ ಹೋಗುವ ರಾಜಹಂಸ ಬಸ್ಸು ಬೆಳಗ್ಗೆ 8 ಗಂಟೆಗೆ ಮತ್ತು ವೇಗಧೂತ ಬಸ್ಸುಗಳು ಬೆಳಿಗ್ಗೆ 8:30 ಮತ್ತು 10:30 ಹಾಗೂ ರಾತ್ರಿ 11:45ಕ್ಕೆ ಹುಬ್ಬಳ್ಳಿಯಿಂದ ಹೊರಡುತ್ತವೆ. ಪಣಜಿಯಿಂದ ಹುಬ್ಬಳ್ಳಿಗೆ ಬರುವ ರಾಜಹಂಸ ಬಸ್ಸು ಮಧ್ಯಾಹ್ನ 2:30ಕ್ಕೆ ವೇಗಧೂತ ಬಸ್ಸುಗಳು ಬೆಳಿಗ್ಗೆ 10:30, ಮಧ್ಯಾಹ್ನ 3 ಗಂಟೆಗೆ ಮತ್ತು ಸಂಜೆ 5:15ಕ್ಕೆ ಪಣಜಿಯಿಂದ ಹೊರಡುತ್ತವೆ. ಈ ಬಸ್ಸುಗಳು ಧಾರವಾಡ, ಕಿತ್ತೂರು, ಖಾನಾಪುರ, ಚೋರ್ಲಾ ಮಾರ್ಗವಾಗಿ ಸಂಚರಿಸುತ್ತವೆ.
ಮಡಗಾಂವಗೆ ಹೋಗುವ ಬಸ್ಸು ಬೆಳಿಗ್ಗೆ 8:30ಕ್ಕೆ ಹುಬ್ಬಳ್ಳಿಯಿಂದ ಹೊರಟು ಕಲಘಟಗಿ, ಯಲ್ಲಾಪುರ, ಅಂಕೋಲಾ, ಕಾರವಾರ, ಸದಾಶಿವಗಡ, ಕಾಣಕೋಣ ಮಾರ್ಗವಾಗಿ ಮಧ್ಯಾಹ್ನ 2:30ಕ್ಕೆ ಮಡಗಾಂವ ತಲುಪುತ್ತದೆ. ಮಧ್ಯಾಹ್ನ 3:00ಕ್ಕೆ ಮಡಗಾಂವನಿಂದ ಹೊರಟು ರಾತ್ರಿ 9 ಗಂಟೆಗೆ ಹುಬ್ಬಳ್ಳಿಗೆ ಆಗಮಿಸುತ್ತದೆ. ವಾಸ್ಕೊಗೆ ಹೋಗುವ ಬಸ್ಸು ರಾತ್ರಿ 12:30ಕ್ಕೆ ಹುಬ್ಬಳ್ಳಿಯಿಂದ ಹೊರಟು ಧಾರವಾಡ, ಕಿತ್ತೂರು, ಖಾನಾಪುರ, ಚೋರ್ಲಾ ಮಾರ್ಗವಾಗಿ ಬೆಳಿಗ್ಗೆ 06 ಗಂಟೆಗೆ ವಾಸ್ಕೊ ತಲುಪುತ್ತದೆ. ವಾಸ್ಕೊದಿಂದ ಮಧ್ಯಾಹ್ನ 1:30ಕ್ಕೆ ಹೊರಟು ಹುಬ್ಬಳ್ಳಿಗೆ ಸಂಜೆ 7:30ಕ್ಕೆ ಆಗಮಿಸುತ್ತದೆ.
ಪ್ರಯಾಣಿಕರ ಬೇಡಿಕೆ ಗಮನಿಸಿ ಮುಂದಿನ ದಿನಗಳಲ್ಲಿ ಬಸ್ಸುಗಳನ್ನು ಹೆಚ್ಚಿಸಲಾಗುತ್ತದೆ ಎಂದು ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮಾಹಿತಿ ನೀಡಿದ್ದಾರೆ.