ಬೆಂಗಳೂರು/ನವದೆಹಲಿ: ಯಾವುದೇ ಕಾರಣಕ್ಕೂ ಯಡಿಯೂರಪ್ಪ ಬದಲಾವಣೆ ಇಲ್ಲ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳುವ ಮೂಲಕ ನಾಯಕತ್ವ ಗೊಂದಲಗಳಿಗೆ ತಾತ್ಕಾಲಿಕ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ಆದ್ರೆ ಶಾಸಕಾಂಗ ಪಕ್ಷದ ಸಭೆ ನಡೆಯುತ್ತಾ? ಇಲ್ಲವಾ? ಎಂಬುದರ ಬಗ್ಗೆ ಇನ್ನೂ ಗುಟ್ಟು ಬಿಟ್ಟು ಕೊಟ್ಟಿಲ್ಲ.
ದೆಹಲಿಯಲ್ಲಿ ಇವತ್ತು ಮಾತನಾಡಿದ ಅರುಣ್ ಸಿಂಗ್ ಯಡಿಯೂರಪ್ಪ ಬದಲಾವಣೆ, ರಾಜ್ಯಾಧ್ಯಕ್ಷರ ಬದಲಾವಣೆಯೂ ಇಲ್ಲ ಎಂದು ಸ್ಪಷ್ಟಪಡಿಸುವ ಪ್ರಯತ್ನ ಮಾಡಿದರು. ಸ್ಥಾನ ಬದಲಾವಣೆ ಕೇವಲ ಕಾಲ್ಪನಿಕ. ಯಡಿಯೂರಪ್ಪ ಉತ್ತಮ ಕೆಲಸ ಮಾಡುತ್ತಿದ್ದಾರೆ. ಯಡಿಯೂರಪ್ಪ ಬದಲಾವಣೆ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡಿಲ್ಲ ಎಂದರು.
ಎಲ್ಲೂ ಒಂದಿಬ್ಬರು ಮಾತನಾಡುತ್ತಿದ್ದಾರೆ. ಅವರು ಬಹಿರಂಗವಾಗಿ ಮಾತನಾಡಬಾರದು. ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಬೇಕು. 16 ಅಥವಾ 17 ರಿಂದ ಮೂರು ದಿನಗಳ ಕಾಲ ರಾಜ್ಯಕ್ಕೆ ತೆರಳುತ್ತಿದ್ದೇನೆ. ಎಲ್ಲ ನಾಯಕರ ಅಭಿಪ್ರಾಯ ಸಂಗ್ರಹಿಸುತ್ತೇನೆ ಅಂತಾ ಅರುಣ್ ಸಿಂಗ್ ಹೇಳಿದರು. ಇದನ್ನೂ ಓದಿ: ಈಶ್ವರಪ್ಪ ಜನ್ಮದಿನಕ್ಕೆ ಸಿಎಂ ಶುಭ ಹಾರೈಕೆ – ಇಬ್ಬರ ಒಡನಾಟದ ಒಂದು ಮೆಲುಕು
ಯಡಿಯೂರಪ್ಪ ಸ್ಫೋಟಕ ಹೇಳಿಕೆ ಬಳಿಕ ಹೈಕಮಾಂಡ್ ಮಟ್ಟದಲ್ಲಿ ಮೊದಲ ಬಾರಿಗೆ ಸಂದೇಶ ಬಹಳಷ್ಟು ಕುತೂಹಲ ಹುಟ್ಟುಹಾಕಿದೆ. ಅರುಣ್ ಸಿಂಗ್ ಮಾತೇ ಫೈನಲ್ ಆಗುತ್ತಾ? ಯಡಿಯೂರಪ್ಪ ವಿರೋಧಿಗಳು ಕೈ ಕಟ್ ಬಾಯ್ ಮುಚ್ ಎಂಬ ಸೂತ್ರ ಪಾಲಿಸುತ್ತಾರಾ ಎಂಬ ಪ್ರಶ್ನೆ ಎದ್ದಿದೆ.
ಈ ನಡುವೆ ಅರುಣ್ ಸಿಂಗ್ ಹೇಳಿಕೆಯಿಂದ ರಾಜ್ಯ ಬಿಜೆಪಿಯಲ್ಲಿ ಮತ್ತಷ್ಟು ಚಟುವಟಿಕೆಗಳು ಗರಿಗೆದರುವ ಸಾಧ್ಯತೆ ಇದೆ. ಅರುಣ್ ಸಿಂಗ್ ಆ ಒಂದು ಹೇಳಿಕೆ ಎಲ್ಲದಕ್ಕೂ ಟ್ವಿಸ್ಟ್ ಕೊಡುತ್ತಾ ಎಂಬ ಕುತೂಹಲವಿದೆ. ಶಾಸಕಾಂಗ ಪಕ್ಷದ ಸಭೆ ನಡೆಸುವ ಬಗ್ಗೆ ಬೆಂಗಳೂರಿಗೆ ಹೋದಮೇಲೆ ತೀರ್ಮಾನ ಅಂದಿರುವ ಗುಟ್ಟೇನು? ಯಡಿಯೂರಪ್ಪ ಪರ- ವಿರೋಧಿಗಳಿಗೆ ಗುಟ್ಟನ್ನು ಬಿಟ್ಟುಕೊಡದೇ ಹೆಜ್ಜೆ ಇಟ್ಟಿದ್ಯಾ ಹೈಕಮಾಂಡ್ ಎಂಬ ಚರ್ಚೆ ಜೋರಾಗಿಯೇ ಆರಂಭವಾಗಿದೆ.
ನಿಷ್ಠ ಬಣ, ಯಡಿಯೂರಪ್ಪ ವಿರೋಧಿ ಬಣ ಎರಡು ಬಣಗಳು ಶಾಸಕಾಂಗ ಪಕ್ಷದ ಸಭೆಗೆ ಒತ್ತಾಯಿಸಿವೆ. ಒಂದು ವೇಳೆ ಶಾಸಕಾಂಗ ಪಕ್ಷದ ಸಭೆ ನಡೆದರೆ ಆ ಪ್ಲ್ಯಾನ್ ಸಕ್ಸಸ್ ಆಗಿಯೇ ಬಿಡುತ್ತಾ? ಅಥವಾ ಶಾಸಕಾಂಗ ಪಕ್ಷದ ಸಭೆಯಲ್ಲಿ ಗದ್ದಲ ಎಬ್ಬಿಸುವ ವಿರೋಧಿಗಳ ಪ್ಲ್ಯಾನ್ ಏನಾಗಬಹುದು ಎಂಬ ಲೆಕ್ಕಚಾರಗಳಿಗೆ ಕಾಲವೇ ಉತ್ತರಿಸಬೇಕಿದೆ.