Connect with us

ಈಶ್ವರಪ್ಪ ಜನ್ಮದಿನಕ್ಕೆ ಸಿಎಂ ಶುಭ ಹಾರೈಕೆ – ಇಬ್ಬರ ಒಡನಾಟದ ಒಂದು ಮೆಲುಕು

ಈಶ್ವರಪ್ಪ ಜನ್ಮದಿನಕ್ಕೆ ಸಿಎಂ ಶುಭ ಹಾರೈಕೆ – ಇಬ್ಬರ ಒಡನಾಟದ ಒಂದು ಮೆಲುಕು

ಬೆಂಗಳೂರು: ಸಚಿವ ಕೆ ಎಸ್ ಈಶ್ವರಪ್ಪ ಇಂದು 74 ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಈಶ್ವರಪ್ಪರ ಜನ್ಮದಿನದ ಹಿನ್ನೆಲೆ ಕೇಂದ್ರ ಮತ್ತು ರಾಜ್ಯದ ಹಲವು ನಾಯಕರು, ಗಣ್ಯರು ಶುಭಾಶಯ ಕೋರುತ್ತಿದ್ದಾರೆ. ಸಿಎಂ ಯಡಿಯೂರಪ್ಪ ಸಹ ಪಕ್ಷದ ತಮ್ಮ ಒಡನಾಡಿ ಈಶ್ವರಪ್ಪರವರಿಗೆ ಟ್ವೀಟ್ ಮಾಡುವ ಮೂಲಕ ಜನ್ಮದಿನದ ಶುಭಾಶಯ ಕೋರಿದ್ದಾರೆ.

ಹಿರಿಯ ನಾಯಕರು, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರು, ನನ್ನ ಆತ್ಮೀಯರೂ ಆಗಿರುವ ಕೆ.ಎಸ್.ಈಶ್ವರಪ್ಪನವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು. ದೇವರ ಅನುಗ್ರಹ ಸದಾ ಈಶ್ವರಪ್ಪ ಮೇಲೆ ಇರಲಿ ಎಂದು ಹಾರೈಸುತ್ತೇನೆ ಎಂದು ಸಿಎಂ ಯಡಿಯೂರಪ್ಪ ಹಾರೈಸಿದ್ದಾರೆ.

ಯಡಿಯೂರಪ್ಪ ಶುಭ ಕೋರಿರುವುದರಲ್ಲಿ ಯಾವುದೇ ವಿಶೇಷತೆ ಕಾಣಿಸುವುದಿಲ್ಲ. ಪ್ರತೀವರ್ಷದ ಅಭ್ಯಾಸದಂತೆ ಈ ವರ್ಷವೂ ಯಡಿಯೂರಪ್ಪನವರು ಈಶ್ವರಪ್ಪರ ಜನ್ಮದಿನಕ್ಕೆ ಹಾರೈಸಿದ್ದಾರೆ ಅಂತ ಅಂದುಕೊಳ್ಳುವುದೇ ಸರಿ. ಅದರೂ ಈ ಸಂದರ್ಭದ ನೆಪದಲ್ಲಿ ಇಬ್ಬರ ಬಾಂಧವ್ಯದ ಬಗ್ಗೆ ಒಂದು ಸಣ್ಣ ನೋಟ ಇಲ್ಲಿದೆ.

ಬಿಜೆಪಿಯಲ್ಲಿ ಯಡಿಯೂರಪ್ಪ – ಈಶ್ವರಪ್ಪ ಹಕ್ಕ-ಬುಕ್ಕರೆಂದೇ ಕರೆಸಿಕೊಳ್ಳುತ್ತಾರೆ. ಇಬ್ಬರೂ ಪಕ್ಷ ಸಂಘಟನೆಗೆ ಜೋಡೆತ್ತುಗಳಂತೆ ದುಡಿದವರು. ಹಲವು ಚುನಾವಣೆಗಳಲ್ಲಿ ಒಟ್ಟಿಗೆ ಓಡಾಡಿದವರು. ಇವರಿಬ್ಬರ ನಡುವೆ ದಶಕಗಳ ಕಾಲದ ಸ್ನೇಹ ಈ ಬಂಧ ಸ್ಟ್ರಾಂಗ್ ಏನೋ ಇದೆ. ಹೀಗಿದ್ದರೂ ಇಬ್ಬರೂ ಆಗಾಗ ಜಗಳ, ಮುನಿಸು, ಪರಸ್ಪರ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿರುವ ಸಂದರ್ಭಗಳು ಸಾಕಷ್ಟಿವೆ. ಅದು ಈಗಲೂ ಮುಂದುವರೆದಿದೆ.

ಇಬ್ಬರ ಮಧ್ಯೆ ಯಾವಾಗ ಜಗಳ, ಮುನಿಸು ಸ್ಫೋಟವಾಗುತ್ತೋ ಗೊತ್ತಾಗುವುದಿಲ್ಲ. ಆದ್ರೆ ಒಮ್ಮೆ ಮನಸ್ತಾಪ ಕಾಣಿಸಿಕೊಂಡರೆ ಇಬ್ಬರೂ ಜಪ್ಪಯ್ಯ ಅಂದ್ರೂ ಮತ್ತೆ ಪರಸ್ಪರ ಎದುರಿದ್ದರೂ ಮಾತಾಡಿಸೋಲ್ಲ. ಹಲವು ಸಲ ಇಬ್ಬರಿಗೂ ಆತ್ಮೀಯರಾಗಿರುವ ಕೇಂದ್ರ ಮತ್ತು ರಾಜ್ಯದ ಕೆಲ ನಾಯಕರು ಇವರಿಬ್ಬರ ಮಧ್ಯೆ ಸಂಧಾನ ನಡೆಸಿದ್ದೂ ಹೌದು. ಅಚ್ಚರಿ ಅಂದ್ರೆ ಮತ್ತೆ ಅದ್ಯಾವುದೋ ಒಂದು ಗಳಿಗೆಯಲ್ಲಿ ಎಲ್ಲ ಮರೆತು ಇಬ್ಬರೂ ಹಕ್ಕ-ಬುಕ್ಕರಾಗಿ ಬಿಡುತ್ತಾರೆ. ಇವರಿಬ್ಬರ ಸಂಬಂಧ ಎಷ್ಟು ವಿಚಿತ್ರ ಮತ್ತು ಅಚ್ಚರಿ ಅಂದ್ರೆ, ಒಂದು ವ್ಯಾಖ್ಯಾನದ ಚೌಕಟ್ಟಿಗೆ ಆ ವಿಕ್ಷಿಪ್ತ ಸಂಬಂಧ ಸಿಲುಕುವುದು ಕಷ್ಟ. ಆದರೆ ಈ ಸಲ ಇಬ್ಬರ ಮಧ್ಯೆ ಎದ್ದಿರುವ ಬಿರುಗಾಳಿ ಸಣ್ಣದೇನಲ್ಲ.

ಕಳೆದ ಏಪ್ರಿಲ್ 1 ರಂದು ಸಿಎಂ ಯಡಿಯೂರಪ್ಪ ವಿರುದ್ಧ ಈಶ್ವರಪ್ಪ ತೀರಾ ರಾಜ್ಯಪಾಲರ ಅಂಗಳಕ್ಕೆ ದೂರು ಒಯ್ದುಬಿಡುತ್ತಾರೆ ಅಂತ ಯಾರೂ ಊಹಿಸಿರಲಿಲ್ಲ. ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಮುಖ್ಯಮಂತ್ರಿಗಳ ಹಸ್ತಕ್ಷೇಪ ಮಾಡುತ್ತಿದ್ದಾರೆ. ನಿಯಮಾವಳಿಗಳ ಪ್ರಕಾರ ಈ ಥರದ ಹಸ್ತಕ್ಷೇಪಗಳಿಗೆ ಅವಕಾಶ ಇಲ್ಲ. ರಾಜ್ಯಪಾಲರು ಮಧ್ಯಪ್ರವೇಶ ಮಾಡಿ ಸಿಎಂಗೆ ಇದನ್ನು ಮನವರಿಕೆ ಮಾಡಿಕೊಡಬೇಕು ಎನ್ನುವುದು ಈಶ್ವರಪ್ಪ ಅವರ ದೂರಿನ ಸಾರಾಂಶ. ಆ ನಂತರ ನಡೆದಿದ್ದು ಇಲ್ಲಿ ಅನಾವಶ್ಯಕ. ಆದ್ರೆ ಆ ದಿನದಿಂದ ಇಂದಿನವರೆಗೆ ಯಡಿಯೂರಪ್ಪ – ಈಶ್ವರಪ್ಪ ಕೆಲವು ಕಾರ್ಯಕ್ರಮಗಳನ್ನು ಒಂದೇ ವೇದಿಕೆಯಲ್ಲಿ ಹಂಚಿಕೊಂಡ್ರೂ ಪರಸ್ಪರ ಮಾತಾಡಿರುವುದು ದಾಖಲಾಗಿಲ್ಲ. ಪರಸ್ಪರರ ಮೇಲೆ ಅಭಿಮಾನ, ಪ್ರೀತಿ ಇಟ್ಕೊಂಡೇ ಇಬ್ಬರೂ ಮುನಿಸಿಕೊಳ್ಳುವುದು ಸಾಮಾನ್ಯವಾಗಿ ಬಿಟ್ಟಿದೆ.

ನಾಯಕತ್ವದ ಬದಲಾವಣೆ ಚರ್ಚೆ ತೀವ್ರವಾಗಿರುವ ಈ ಸಮಯದಲ್ಲಿ ಇತರೇ ಸಚಿವರಂತೆ ಈಶ್ವರಪ್ಪ ಸಹ ಸದ್ಯಕ್ಕೆ ಹೈಕಮಾಂಡ್ ಎದುರು ಮುಖ್ಯಮಂತ್ರಿಗಳ ಬದಲಾವಣೆ ಇಲ್ಲ ಅಂತಲೇ ಮೊನ್ನೆ ಹೇಳಿಕೆ ಕೊಟ್ಟಿದ್ದರು. ಯಡಿಯೂರಪ್ಪನವರ ಸ್ಥಾನ ಸದ್ಯ ಡೋಲಾಯಮಾನವಾಗಿರುವ ಈ ಸಂದರ್ಭದಲ್ಲಿ ಈಶ್ವರಪ್ಪನವರು ಯಡಿಯೂರಪ್ಪ ಪರ ನಿಲ್ತಾರಾ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

 

Advertisement
Advertisement