– ಜೆಡಿಎಸ್‍ನವರು ಬಿಜೆಪಿಗೆ ಸಹಾಯ ಮಾಡಲು ಹೊರಟಿದ್ದಾರೆ
ಹುಬ್ಬಳ್ಳಿ: ನಾನು ಸಿಎಂ ಆಗಿದ್ದಾಗ ಏನು ಅಭಿವೃದ್ಧಿ ಮಾಡಿದ್ದೇನೆ ಅಂತ ರಾಜ್ಯದ ಜನರಿಗೆ ಗೊತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ಏನೂ ಸಾಧನೆ ಮಾಡಿಲ್ಲ ಅಂತ ಸಚಿವ ಈಶ್ವರಪ್ಪ ಟೀಕೆ ವಿಚಾರಕ್ಕೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದ ಅವರು, ಯಾರು ಈಶ್ವರಪ್ಪ…?, ನನಗೆ ಈಶ್ವರಪ್ಪ ಸರ್ಟಿಫಿಕೇಟ್ ಬೇಕಾಗಿಲ್ಲ. ಐ ಡೋಂಟ್ ಕೇರ್ ಈಶ್ವರಪ್ಪ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದೇ ವೇಳೆ ಉಪಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧೆ ಮಾಡಲ್ಲ ಅನ್ನೋ ವಿಚಾರ ಸಂಬಂಧ ಮಾತನಾಡಿದ ಅವರು, ಜೆಡಿಎಸ್ ಗೆ ಉತ್ತರ ಕರ್ನಾಟಕದಲ್ಲಿ ನೆಲೆ ಇಲ್ಲ. ಜೆಡಿಎಸ್ ನವರು ಬಿಜೆಪಿಗೆ ಸಹಾಯ ಮಾಡಲು ಹೊರಟಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರಿಗೆ ಕೊರೆತೆಯಿಲ್ಲ. ಚುನಾವಣೆ ಘೋಷಣೆಯಾದ ಕೂಡಲೇ ಅಭ್ಯರ್ಥಿ ಘೋಷಣೆ ಮಾಡುತ್ತೇವೆ. ಹಿಂದ್ ಸಮಾವೇಶ ಮಾಡಲ್ಲ. ಕಾಂಗ್ರೆಸ್ ಹಿಂದುಳಿದವರ ಪರವಾಗಿದೆ. ಹೋರಾಟದ ಅವಶ್ಯಕತೆ ಇಲ್ಲ ಎಂದರು.
ಕುರುಬರಿಗೆ ಎಸ್ ಟಿ ಮೀಸಲು ನೀಡುವ ಬಗ್ಗೆ ಕುಲಶಾಸ್ತ ಅಧ್ಯಯನದ ವರದಿ ಬಂದಿಲ್ಲ. ವರದಿ ಬರುವ ಮುನ್ನವೇ ಹೋರಾಟ ಬೇಡ ಅಂದಿದ್ದೆ. ನಾನು ಸಿಎಂ ಆಗಿದ್ದ ವೇಳೆ ನಾಲ್ಕು ಜಿಲ್ಲೆಗಳಲ್ಲಿ ಕುರುಬರನ್ನ ಎಸ್ ಟಿಗೆ ಸೇರಿಸಬೇಕು ಅಂತ ಆದೇಶ ಮಾಡಿದ್ದೆ. ಎಸ್ ಟಿ ಮೀಸಲು ಹೋರಾಟದಲ್ಲಿ ರಾಜಕೀಯ ಮಾಡಲ್ಲ. ಇದೂ ಆರ್ ಎಸ್ ಎಸ್ ಪ್ರೇರಿತ ಹೋರಾಟ. ಈಶ್ವರಪ್ಪ ರನ್ನ ಆರ್‍ಎಸ್‍ಎಸ್ ನವರು ಎತ್ತಿ ಕಟ್ಟಿ ಹೋರಾಟ ಮಾಡಿಸುತ್ತಿದ್ದಾರೆ ಎಂದು ಕಿಡಿಕಾರಿದರು.